ಏಕರೂಪ ನಾಗರಿಕ ಸಂಹಿತೆಗೆ ಆರೆಸ್ಸೆಸ್ ಬೆಂಬಲಿತ ಸಂಘಟನೆ, ಬುಡಕಟ್ಟು ಘಟಕದ ವಿರೋಧ

Update: 2023-07-07 14:10 GMT

ಸಾಂದರ್ಭಿಕ ಚಿತ್ರ \ Photo: PTI 

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (UCC)ಗೆ ಮೋದಿ ಸರಕಾರವು ನೀಡುತ್ತಿರುವ ಒತ್ತು ಮತ್ತು ಅದರ ವ್ಯಾಪ್ತಿಯಿಂದ ಆದಿವಾಸಿಗಳನ್ನು ಹೊರಗಿಡದಿರುವ ಸಾಧ್ಯತೆಯು ಆಡಳಿತಾರೂಢ ಬಿಜೆಪಿಯೊಳಗೆ ಮಾತ್ರವಲ್ಲ, ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ ಮತ್ತು ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನೂ ಮುನ್ನೆಲೆಗೆ ತಂದಿದೆ.

ಯುಸಿಸಿಯ ಅನುಷ್ಠಾನವು ಈ ವರ್ಷ ನಡೆಯಲಿರುವ ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲ, ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ 47 ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಭವಿಷ್ಯಕ್ಕೆ ಹೊಡೆತ ನೀಡುವ ಆತಂಕವಿದೆ ಎಂದು ಬಿಜೆಪಿಯಲ್ಲಿನ ಮೂಲಗಳು ತಿಳಿಸಿವೆ.

2019ರ ಲೋಕಸಭಾ ಚುನಾವಣೆಗಳಲ್ಲಿ ಈ 47 ಕ್ಷೇತ್ರಗಳ ಪೈಕಿ ಬಿಜೆಪಿ 31ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಕೇವಲ ನಾಲ್ಕು ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿತ್ತು.

‘ಸರಕಾರವು ಬೃಹತ್ ಧ್ರುವೀಕರಣದತ್ತ ನೋಡುತ್ತಿದೆಯೇ ಅಥವಾ ಕೇವಲ ಪ್ರತಿಕ್ರಿಯೆಗಳನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿದೆಯೇ ಎನ್ನುವುದು ಸ್ವಷ್ಟವಾಗಿಲ್ಲ, ಆದರೆ ಸಿಎಎ-ಎನ್‌ಆರ್‌ಸಿಯ ಹಣೆಬರಹ ಏನಾಗಲಿದೆ ಎನ್ನುವುದು ನಮಗೆ ತಿಳಿದಿದೆ, ಹೀಗಾಗಿ ಯುಸಿಸಿ ಒಂದು ಜೂಜಾಗಿದೆ ’ ಎಂದು ಛತ್ತೀಸ್‌ಗಡದ ಮಾಜಿ ಸಚಿವ ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕರೋರ್ವರು ಹೇಳಿದರು.

ಚುನಾವಣೆಯ ಸಮಯದಲ್ಲಿ ಯಾವುದೇ ತಪ್ಪು ಕಲ್ಪನೆಯು ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಬಹುದು. ಅದು ಸಮುದಾಯಗಳ ನಡುವೆ ಧ್ರುವೀಕರಣಕ್ಕೆ ಕಾರಣವಾಗುವ ಬದಲು ಹೆಚ್ಚಿನ ಹಾನಿಗೆ ಕಾರಣವಾಗಬಹುದು ಮತ್ತು ಅದನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಹೆಸರು ಹೇಳಿಕೊಳ್ಳಲು ಬಯಸದ ಬಿಜೆಪಿಯ ಹಿರಿಯ ಬುಡಕಟ್ಟು ನಾಯಕರೋರ್ವರು ಕಳವಳ ವ್ಯಕ್ತಪಡಿಸಿದರು.

ಆರೆಸ್ಸೆಸ್ ಬೆಂಬಲಿತ ಬುಡಕಟ್ಟು ಹಿತರಕ್ಷಣಾ ಸಂಘಟನೆ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ (ABKVA)ವು ಕೂಡ ಬಿಜೆಪಿಯು ಯುಸಿಸಿಗೆ ಮತ್ತೊಮ್ಮೆ ಒತ್ತು ನೀಡುತ್ತಿರುವುದಕ್ಕೆ ಮತ್ತು ಅದರ ವ್ಯಾಪ್ತಿಗೆ ಬುಡಕಟ್ಟು ಸಮುದಾಯಗಳನ್ನೂ ಸೇರಿಸಬೇಕೇ ಎಂಬ ಬಗ್ಗೆ ಸಹಮತವನ್ನು ಹೊಂದಿಲ್ಲ.

ಭಾರತದಲ್ಲಿ ಒಟ್ಟು 730 ಬುಡಕಟ್ಟುಗಳು ಸಂವಿಧಾನದ ವಿವಿಧ ನಿಬಂಧನೆಗಳ ಅಡಿ ರಕ್ಷಣೆಯನ್ನು ಹೊಂದಿವೆ. ಬುಡಕಟ್ಟು ಜನರಲ್ಲಿ ಬೇಗನೆ ಮದುವೆ ಮಾಡುವ ಸಂಪ್ರದಾಯವಿದೆ. ಯುಸಿಸಿಯನ್ನು ಜಾರಿಗೊಳಿಸಿದರೆ ಅದು ಪತಿ ಅಥವಾ ಪತ್ನಿಯ ಉತ್ತರಾಧಿಕಾರ ಹಕ್ಕಿನ ಮೇಲೆ ಪರಿಣಾಮವನ್ನುಂಟು ಮಾಡಬಹುದು. ಈಶಾನ್ಯ ಭಾರತದಲ್ಲಿ ಮತ್ತು ಜಾರ್ಖಂಡ್‌ನಲ್ಲಿ ಉತ್ತರಾಧಿಕಾರಕ್ಕಾಗಿ ವಿವಿಧ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಎಬಿಕೆವಿಎ ಪದಾಧಿಕಾರಿಯೋರ್ವರು ಹೇಳಿದರು.

ಈ ನಡುವೆ ಎಬಿಕೆವಿಎ ಕಾರ್ಯದರ್ಶಿ ಅತುಲ್ ಜೋಗ್ ಅವರು ಬುಡಕಟ್ಟುಗಳನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿರಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲಕುಮಾರ ಮೋದಿ ಅವರು ನೀಡಿರುವ ಸಲಹೆಯನ್ನು ತಾನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.

ಕಳೆದ ವಾರ ಭೋಪಾಲದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುಸಿಸಿಯ ಅಗತ್ಯವನ್ನು ಪ್ರತಿಪಾದಿಸಿದ ಬಳಿಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಏಕರೂಪ ನಾಗರಿಕ ಸಂಹಿತೆಯ ಜಾರಿಗಾಗಿ ಮಾರ್ಗಸೂಚಿಯನ್ನು ರೂಪಿಸುವಂತೆ ಸರಕಾರಿ ಯಂತ್ರವನ್ನು ಸಕ್ರಿಯಗೊಳಿಸಿದೆ.

22ನೇ ಕಾನೂನು ಆಯೋಗವು ಯುಸಿಸಿಗೆ ಸಂಬಂಧಿಸಿದಂತೆ ಆರಂಭಿಸಿರುವ ಸಮಾಲೋಚನೆ ಪ್ರಕ್ರಿಯೆಯು ಮುಂದುವರಿದ ಹಂತದಲ್ಲಿದ್ದು, ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ.

ಇದೇ ವೇಳೆ ಉತ್ತರಾಖಂಡ ಯುಸಿಸಿ ಕರಡು ಮಸೂದೆಯನ್ನು ರೂಪಿಸುವ ಹೊಣೆಯನ್ನು ಹೊತ್ತಿರುವ ನಿವೃತ್ತ ನ್ಯಾ.ರಂಜನಾ ಪ್ರಕಾಶ ದೇಸಾಯಿ ನೇತೃತ್ವದ ಸಮಿತಿಯು ಬಿಜೆಪಿ ಆಡಳಿತದ ರಾಜ್ಯ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸುವ ಅಂತಿಮ ಘಟ್ಟದಲ್ಲಿದೆ ಎನ್ನಲಾಗಿದೆ. ಈ ಸಂಬಂಧ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಮತ್ತು ನ್ಯಾ.ದೇಸಾಯಿ ಅವರು ಸೋಮವಾರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರೆಂದು ಹೇಳಲಾಗಿದ್ದು, ಮರುದಿನವೇ ಧಾಮಿಯವರು ಮೋದಿಯವರೊಂದಿಗೆ ಮಾತುಕತೆಗಳನ್ನು ನಡೆಸಿದ್ದಾರೆ.

ಸರಕಾರದ ಅಂಕಿಅಂಶಗಳಂತೆ ಭಾರತದಲ್ಲಿ 10.4 ಕೋಟಿ (ದೇಶದ ಒಟ್ಟು ಜನಸಂಖ್ಯೆಯ ಶೇ.8.6) ಆದಿವಾಸಿಗಳಿದ್ದಾರೆ. ಅಸ್ಸಾಂ,ಮೇಘಾಲಯ,ತ್ರಿಪುರಾ ಮತ್ತು ಮಿರೆರಾಮ್‌ನಲ್ಲಿಯ ಆದಿವಾಸಿಗಳನ್ನು ಹೊರತುಪಡಿಸಿ ಬುಡಕಟ್ಟು ಜನರ ಹಕ್ಕುಗಳು ಸಂವಿಧಾನದ ಐದನೇ ಅನುಸೂಚಿಯಡಿ ರಕ್ಷಣೆಯನ್ನು ಹೊಂದಿವೆ. ಈಶಾನ್ಯ ಭಾರತದ ಹಲವಾರು ರಾಜ್ಯಗಳಲ್ಲಿ ಆದಿವಾಸಿಗಳ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.68ಕ್ಕೂ ಹೆಚ್ಚಿದ್ದು, ವಿವಾಹ ಮತ್ತು ಉತ್ತರಾಧಿಕಾರ ಕುರಿತು ಅವರ ಸಾಂಪ್ರದಾಯಿಕ ಕಾನೂನುಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ.

ಅತ್ತ ಜಾರ್ಖಂಡ್‌ನಲ್ಲಿ ಆದಿವಾಸಿಗಳ ಜನಸಂಖ್ಯೆಯಲ್ಲಿ ಸಿಂಹಪಾಲು ಹೊಂದಿರುವ ಸಂತಾಲರಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಈಗಲೂ ಆಚರಣೆಯಲ್ಲಿವೆ.

ಬಿಜೆಪಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಬುಡಕಟ್ಟು ನಾಯಕರನ್ನು ಉನ್ನತ ಹುದ್ದೆಗಳಿಗೆ ನೇಮಕಗೊಳಿಸಿರುವುದು ಆದಿವಾಸಿಗಳನ್ನು ತಲುಪುವ ಅದರ ಪ್ರಯತ್ನದ ಭಾಗವಾಗಿದೆ ಎಂದು ಪರಿಗಣಿಸಲಾಗುತ್ತಿದೆ.

ಯುಸಿಸಿ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡುವಂತೆ ಬಿಜೆಪಿಗೆ ಸಲಹೆ ನೀಡಿರುವ ಮಿತ್ರಪಕ್ಷಗಳಲ್ಲಿ ಎಐಎಡಿಎಂಕೆ,ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್, ಮಿರೆ ನ್ಯಾಷನಲ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿವೆ. ಅಲ್ಲದೆ ಯುಸಿಸಿ ಜಾರಿಗೆ ಈಶಾನ್ಯದಲ್ಲಿಯ ಬಿಜೆಪಿ ಮಿತ್ರಪಕ್ಷಗಳ ವಿರೋಧವು ಪ್ರದೇಶದಲ್ಲಿ ಪಕ್ಷದ ಅಸ್ತಿತ್ವಕ್ಕೆ ಅಪಾಯವನ್ನು ಒಡ್ಡಬಹುದು.

ಬಿಜೆಪಿಯ ಮಾಜಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವು ಯುಸಿಸಿಯ ಅಗತ್ಯವನ್ನು ಪ್ರಶ್ನಿಸಿದರೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಅದನ್ನು ಸಾರಾಸಗಟಾಗಿ ವಿರೋಧಿಸಿದೆ. ಜಾರಿಗೆ ಮುನ್ನ ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ ಎಂಬ ಷರತ್ತಿನೊಂದಿಗೆ ಪ್ರತಿಪಕ್ಷಗಳು ಯುಸಿಸಿಗೆ ತಾತ್ವಿಕ ಬೆಂಬಲವನ್ನು ನೀಡಿವೆ ಅಥವಾ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ.

ಬಿಜೆಪಿಯ ಛತ್ತೀಸ್‌ಗಡ ಬುಡಕಟ್ಟು ಮೋರ್ಚಾದ ಮುಖ್ಯಸ್ಥರು ಆದಿವಾಸಿಗಳನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಹೇಳಿದ್ದಾರೆ. 2018ರ ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿಯ ಬುಡಕಟ್ಟು ಬಾಹುಳ್ಯದ ಬಸ್ತಾರ್ ಮತ್ತು ಸುರ್ಗುಜಾ ಪ್ರದೇಶಗಳಲ್ಲಿ ಬಿಜೆಪಿಯು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಯುಸಿಸಿ ಅನುಷ್ಠಾನಕ್ಕೆ ಬಿಜೆಪಿಯ ಒಳಗಿನಿಂದಲೇ ವಿರೋಧಗಳು ವ್ಯಕ್ತವಾಗಿವೆ. ಛತ್ತೀಸ್‌ಗಡದೊಂದಿಗೆ ಈ ಎರಡು ರಾಜ್ಯಗಳಲ್ಲಿಯೂ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಜಾರ್ಖಂಡ್‌ನಲ್ಲಿ ಮುಂದಿನ ವರ್ಷದ ಉತ್ತರಾರ್ಧದಲ್ಲಿ ಚುನಾವಣೆಗಳು ನಡೆಯಲಿವೆ, ಆದರೆ ಅಲ್ಲಿಯ ಹಲವಾರು ಬುಡಕಟ್ಟು ಸಂಘಟನೆಗಳು ಯುಸಿಸಿ ವಿರುದ್ಧ ಈಗಾಗಲೇ ಪ್ರತಿಭಟನೆಯಲ್ಲಿ ತೊಡಗಿವೆ.

ಕೃಪೆ: theprint.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News