ಸಂವಿಧಾನ ರಚನೆಯಲ್ಲಿ ಆರೆಸ್ಸೆಸ್, ಹಿಂದೂ ಮಹಾಸಭಾದ ಕೊಡುಗೆ ಏನಿದೆ?: ಲೋಕಸಭೆಯಲ್ಲಿ ಡಿಎಂಕೆ ಸಂಸದ ಎ.ರಾಜಾ ಪ್ರಶ್ನೆ
ಹೊಸದಿಲ್ಲಿ: ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಾವರ್ಕರ್ ತಂದಿದ್ದು ಹೊರತು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅಲ್ಲ ಎಂದು ಡಿಎಂಕೆ ಸಂಸದ ಎ. ರಾಜ ಸಂಸತ್ತಿನಲ್ಲಿ ಹೇಳಿದ್ದು, ಸಂವಿಧಾನ ರಚನೆಯಲ್ಲಿ ಆರೆಸ್ಸೆಸ್, ಹಿಂದೂ ಮಹಾಸಭಾದ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಡಿಎಂಕೆ ಸಂಸದ ಎ. ರಾಜಾ, ಸಂವಿಧಾನಕ್ಕೆ ವಲಭಭಾಯಿ ಪಟೇಲ್, ಸರೋಜಿನಿ ನಾಯ್ಡು, ನೆಹರೂ ಸೇರಿದಂತೆ ಹಲವಾರು ಜನರು ಕೊಡುಗೆ ನೀಡಿದ್ದಾರೆ. ಆದರೆ, ನನ್ನ ಒಂದೇ ಒಂದು ಪ್ರಶ್ನೆ ಏನೆಂದರೆ, ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಹಿಂದೂ ಮಹಾಸಭಾದ ಕೊಡುಗೆ ಏನಿದೆ ಎಂದು ವಿವರಿಸಬೇಕು ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಆಂತರಿಕ ಭದ್ರತಾ ಕಾಯಿದೆ (ಎಂಐಎಸ್ಎ) ಜಾರಿಗೊಳಿಸಿದಾಗ ಪ್ರಜಾಪ್ರಭುತ್ವದ ಮೇಲೆ ಮಾತ್ರ ದಾಳಿ ನಡೆಯಿತು, ಆದರೆ ಬಿಜೆಪಿ ಅವಧಿಯಲ್ಲಿ ಸಂವಿಧಾನದ ಮೂಲ ರಚನೆ ಮೇಲೆ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ವೇಳೆ ಆಂತರಿಕ ಭದ್ರತಾ ಕಾಯಿದೆ ಜಾರಿಗೆ ತಂದಾಗ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ, ಆದರೆ ನಿಮ್ಮ ಆಡಳಿತದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ, ಕಾನೂನು, ಸಮಾನತೆ, ಸಂಯುಕ್ತ ವ್ಯವಸ್ಥೆ, ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆ ಎಲ್ಲವೂ ಇಲ್ಲವಾಗಿದೆ ಎಂದು ಹೇಳಿದ್ದಾರೆ.
ಡಿಎಂಕೆ ಸಂಸ್ಥಾಪಕ ಎಂ ಕರುಣಾನಿಧಿ ಅವರನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲಾಗಿತ್ತು ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜಾ, ತಮ್ಮ ಪಕ್ಷವು ಕಾಂಗ್ರೆಸ್ನೊಂದಿಗೆ ಅಭಿಪ್ರಾಯ ವ್ಯತ್ಯಾಸ ಹೊಂದಿದ್ದೇವೆ, ಆದರೆ ಸಂವಿಧಾನವನ್ನು ಎತ್ತಿಹಿಡಿಯುವಲ್ಲಿ ಅವರೊಂದಿಗೆ ಇರುವುದಾಗಿ ಹೇಳಿದ್ದಾರೆ.