ಕೇಂದ್ರ ಸರಕಾರದ ಎ ಐ ಯು ಮುಖ್ಯಸ್ಥೆ ಪಂಕಜಾ ಮಿತ್ತಲ್ ಆರೆಸ್ಸೆಸ್ ಜೊತೆ ನಂಟಿರುವ ಶಿಕ್ಷಾ ಉತ್ಥಾನ ನ್ಯಾಸ್ ಗೆ ಅಧ್ಯಕ್ಷೆ
ಹೊಸದಿಲ್ಲಿ: ಅನುದಾನಿತ ವಿವಿಗಳ ಒಕ್ಕೂಟ, ಕೇಂದ್ರ ಸರಕಾರದ ಅನುದಾನಿತ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ (ಎಐಯು)ನ ಕಾರ್ಯಕಾರಿ ಮುಖ್ಯಸ್ಥೆ ಪಂಕಜ್ ಮಿತ್ತಲ್ ಅವರು ಆರೆಸ್ಸೆಸ್‌ನೊಂದಿಗೆ ನಂಟು ಹೊಂದಿರುವ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್‌ನ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದು, ಇದು ಸರಕಾರದ ಮತ್ತು ಆರೆಸ್ಸೆಸ್ ಘಟಕಗಳ ನಡುವಿನ ಗಡಿಗಳನ್ನು ಮಸುಕಾಗಿಸುವ ಆರೋಪಗಳಿಗೆ ಅವಕಾಶವನ್ನು ತೆರೆದಿದೆ ಎಂದು telegraphindia.com ವರದಿ ಮಾಡಿದೆ.
ಮಿತ್ತಲ್ ಅವರು ಎಐಯುದ ಮಹಾ ಕಾರ್ಯದರ್ಶಿಯಾಗಿ ಮುಂದುವರಿಯುವ ನಿರೀಕ್ಷೆಯಿದ್ದು, ಇದು ಶೈಕ್ಷಣಿಕ ಸಂಸ್ಥೆಯ ಉಪ ಕಾನೂನುಗಳ ಮೇಲೆ ಒತ್ತಡವನ್ನುಂಟು ಮಾಡುವ ಸಾಧ್ಯತೆಯಿದೆ.
1925ರಲ್ಲಿ ಸ್ಥಾಪನೆಗೊಂಡ ಎಐಯು ಭಾರತದ ಎಲ್ಲ ವಿವಿಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ. ಇದು ಭಾರತೀಯರು ವಿದೇಶಿ ವಿವಿಗಳಿಂದ ಪಡೆಯುವ ಪದವಿಗಳಿಗೆ ಸಮಾನತೆಯನ್ನು ನೀಡುವ ನೋಡಲ್ ಏಜೆನ್ಸಿಯಾಗಿದೆ.
ನ್ಯಾಸ್ ಪಠ್ಯಕ್ರಮ ಸುಧಾರಣೆಗಳ ಕುರಿತು ಸರಕಾರಕ್ಕೆ ಸ್ವಯಂ ನೇಮಕಗೊಂಡ ಸಲಹಾ ಸಂಸ್ಥೆಯಾಗಿದೆ. ಅದರ ಹಿಂದಿನ ಅಧ್ಯಕ್ಷ ದೀನಾನಾಥ ಬಾತ್ರಾ ಅವರು ಕಟ್ಟಾ ಆರೆಸ್ಸೆಸ್ ಸಿದ್ಧಾಂತವಾದಿಯಾಗಿದ್ದರೆ, ಅದರ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕೊಠಾರಿಯವರು ಆರೆಸ್ಸೆಸ್ ಪ್ರಚಾರಕರಾಗಿದ್ದಾರೆ.
ಶಾಲೆಗಳಲ್ಲಿ ‘ವೇದ ಗಣಿತ’ವನ್ನು ಪರಿಚಯಿಸುವುದು ನ್ಯಾಸ್ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವಗಳಲ್ಲೊಂದಾಗಿದೆ.
ಎಐಯು ಉಪಕಾನೂನು ಹೇಳುವಂತೆ ಮಹಾ ಕಾರ್ಯದರ್ಶಿ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ಭಾಗಿಯಾಗುವ ಯಾವುದೇ ಸಂಘಟನೆಯ ಸದಸ್ಯರಾಗಿದ್ದರೆ ಅಥವಾ ಅದರೊಂದಿಗೆ ಗುರುತಿಸಿಕೊಂಡಿದ್ದರೆ ಅಥವಾ ಯಾವುದೇ ರಾಜಕೀಯ ಆಂದೋಲನ ಅಥವಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಹುದ್ದೆಯಿಂದ ತೆಗೆದುಹಾಕಬಹುದು.
ಆರೆಸ್ಸೆಸ್ ಮತ್ತು ನ್ಯಾಸ್ ಅಧಿಕೃತವಾಗಿ ರಾಜಕೀಯೇತರ ಸಂಘಟನೆಗಳಾಗಿದ್ದರೆ, ಆರೆಸ್ಸೆಸ್‌ನ ಹಿಂದು ರಾಷ್ಟ್ರವಾದಿ ಕಾರ್ಯಸೂಚಿಯ ಪ್ರತಿಪಾದನೆಯನ್ನು ರಾಜಕೀಯ ಹೋರಾಟಕ್ಕೆ ಬೆಂಬಲವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಇನ್ನೊಂದು ಉಪನಿಬಂಧನೆಯಂತೆ ಮಹಾ ಕಾರ್ಯದರ್ಶಿಗಳ ಮೊದಲ ಬಾರಿಯ ಅಧಿಕಾರಾವಧಿಯು ಐದು ವರ್ಷಗಳದ್ದಾಗಿರುತ್ತದೆ ಮತ್ತು ಅವರು ಐದು ವರ್ಷಗಳ ಇನ್ನೊಂದು ಅಧಿಕಾರಾವಧಿಗೆ ಮರುನೇಮಕಕ್ಕೆ ಅರ್ಹರಾಗಿರುತ್ತಾರೆ. ಮರುನೇಮಕವು ನಿರ್ಗಮಿಸಲಿರುವ ಮಹಾ ಕಾರ್ಯದರ್ಶಿ ಇತರ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸುವುದನ್ನು ಒಳಗೊಂಡಿರುತ್ತದೆ. ಆದಾಗ್ಯೂ ಎಐಯು ಆಡಳಿತ ಮಂಡಳಿಯು ಜೂನ್‌ನಲ್ಲಿ ಅಧಿಕಾರಾವಧಿ ಅಂತ್ಯಗೊಳ್ಳಲಿರುವ ಮಿತ್ತಲ್ ಅವರಿಗೆ ಐದು ವರ್ಷಗಳ ವಿಸ್ತರಣೆಯನ್ನು ನೀಡುವ ಪ್ರಸ್ತಾವವನ್ನು ಇತ್ತೀಚಿಗೆ ಅನುಮೋದಿಸಿದೆ. ಉಪನಿಯಮಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.
ಮಿತ್ತಲ ಉತ್ತರಾಧಿಕಾರಿಗಾಗಿ ಆಯ್ಕೆಯನ್ನು ಎಐಯು ಇನ್ನೂ ಆರಂಭಿಸಿಲ್ಲ ಎನ್ನುವುದನ್ನು ಪರಿಗಣಿಸಿದರೆ ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಕ್ರಮಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
ಈ ಬೆಳವಣಿಗೆಯ ಬಗ್ಗೆ ಖ್ಯಾತ ಸಮಾಜಶಾಸ್ತ್ರಜ್ಞ ಆಂದ್ರೆ ಬೆಟೆಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಸರಕಾರಿ ಅನುದಾನಿತ ಸಂಸ್ಥೆಯೊಂದರ ಕಾರ್ಯಕಾರಿ ಮುಖ್ಯಸ್ಥರು ಆರೆಸ್ಸೆಸ್ ಬೆಂಬಲಿತ ಸಂಸ್ಥೆಯ ಅಧಿಕಾರವನ್ನು ವಹಿಸಿಕೊಂಡಿರುವುದು ಚಿಂತೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಎಐಯು ಕಾರ್ಯಕಾರಿ ಮುಖ್ಯಸ್ಥರನ್ನು ನ್ಯಾಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದು ಏಕೆ ಎಂಬ ಪ್ರಶ್ನೆಗೆ ಕೊಠಾರಿ,ನ್ಯಾಸ್ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಆರೆಸ್ಸೆಸ್ ಮತ್ತು ನ್ಯಾಸ್ ಅನ್ನು ದೂಷಿಸುವುದು ನಿಮ್ಮ ಕಾರ್ಯಸೂಚಿಯಾಗಿದೆ. ಯಾವುದೇ ಪ್ರಜೆಯು ಯಾವುದೇ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬಹುದು. ಆರೆಸ್ಸೆಸ್ ರಾಜಕೀಯ ಸಂಘಟನೆಯಲ್ಲ. ನ್ಯಾಸ್ ಕೂಡ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.