ಚುನಾವಣಾ ಬಾಂಡ್ ಮಾರಾಟ, ನಗದೀಕರಣ ಕುರಿತ ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ SBI
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳ ಮಾರಾಟ ಮತ್ತು ನಗದೀಕರಣ ಕುರಿತಂತೆ ತಾನು ಶಾಖೆಗಳಿಗೆ ನೀಡಿದ ಎಸ್ಒಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ಪ್ರತಿಯನ್ನು ಒದಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ನಿರಾಕರಿಸಿದೆ. ಈ ಪ್ರತಿಯನ್ನು ಕೋರಿ RTI ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಕೋರಲಾದ ಮಾಹಿತಿಯನ್ನು ಬ್ಯಾಂಕ್ “ಕಮರ್ಷಿಯಲ್ ಕಾನ್ಫಿಡೆನ್ಸ್” ಆಗಿ ಇರಿಸಿಕೊಂಡಿದೆ ಮತ್ತು ಅದು “ಬ್ಯಾಂಕ್ ನ ಬೌದ್ಧಿಕ ಆಸ್ತಿ” ಎಂದು ಮಾಹಿತಿ ನಿರಾಕರಣೆಗೆ ಬ್ಯಾಂಕ್ ಕಾರಣ ನೀಡಿದೆ. ಮೇಲಾಗಿ ಆಂತರಿಕ ಮಾರ್ಗಸೂಚಿಗಳು ಚುನಾವಣಾ ಬಾಂಡ್ ಕುರಿತಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಮಾತ್ರ ಆಗಿವೆ ಎಂದೂ ಬ್ಯಾಂಕ್ ಹೇಳಿದೆ.
ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಅವರು ಮಾರ್ಚ್ 4ರಂದು RTI ಅರ್ಜಿ ಸಲ್ಲಿಸಿ ಎಪ್ರಿಲ್ 2017ರಂದು ಬ್ಯಾಂಕ್ ಇದೀಗ ರದ್ದುಗೊಂಡಿರುವ ಬಾಂಡ್ ಗಳ ಕುರಿತಂತೆ ಜಾರಿಗೊಳಿಸಲಾದ ಎಸ್ಒಪಿ ಕುರಿತು ಮಾಹಿತಿ ಕೋರಿದ್ದರು. ಆದರೆ ಬ್ಯಾಂಕ್ ಮಾಹಿತಿಯನ್ನು ನಿರಾಕರಿಸಿದ ನಂತರ ಅವರು SBIನ ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮೇ 17ರಂದು ಪ್ರಾಧಿಕಾರ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಅವರು ಈಗ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.