ಖನಿಜ ಹಕ್ಕುಗಳಿಗೆ ತೆರಿಗೆ ವಿಧಿಸಲು ಅವಕಾಶ ನೀಡಿರುವ ತೀರ್ಪಿನ ವಿರುದ್ಧ ಮರುಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

Update: 2024-10-05 10:19 GMT

Photo : PTI 

ಹೊಸದಿಲ್ಲಿ: ಸರಕಾರಿ ಭೂಮಿಯಲ್ಲಿ ಖನಿಜ ಗಣಿಗಾರಿಕೆಯ ಮೇಲೆ ರಾಯಧನ ವಿಧಿಸಲು ಹಾಗೂ ಗಣಿಗಳು ಮತ್ತು ಕೋರೆಗಳನ್ನು ಹೊಂದಿರುವ ಭೂಮಿಗಳಿಗೆ ತೆರಿಗೆ ಹೇರಲು ರಾಜ್ಯಗಳ ಅಧಿಕಾರವನ್ನು ಎತ್ತಿ ಹಿಡಿದಿದ್ದ ತನ್ನ 8:1 ಬಹುಮತದ ತೀರ್ಪಿನ ಪುನರ್ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಷ ರಾಯ್, ಎ.ಎಸ್.ಓಕಾ, ಜೆ.ಬಿ.ಪರ್ದಿವಾಲಾ,ಮನೋಜ ಮಿಶ್ರಾ,ಉಜ್ಜಲ ಭುಯಾನ್, ಎಸ್.ಸಿ.ಶರ್ಮಾ,ಎ.ಜಿ.ಮಸೀಹ್ ಅವರು ಸೆ.24ರ ಬಹುಮತದ ತೀರ್ಪಿನಲ್ಲಿ ಪುನರ್ಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ನ್ಯಾ.ನಾಗರತ್ನಾ ಅವರು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇತ್ತೀಚಿಗೆ ಅದರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.

‘ಪುನರ್ಪರಿಶೀಲನೆ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ದಾಖಲೆಗಳಲ್ಲಿ ಮೇಲ್ನೋಟಕ್ಕೆ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013ರ ಆದೇಶ XLVII ನಿಯಮ 1ರಡಿ ಪುನರ್ಪರಿಶೀಲನೆಗೆ ಯಾವುದೇ ಸಮರ್ಥನೆಯಿಲ್ಲ. ಹೀಗಾಗಿ ಪುನರ್ಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಲಾಗಿದೆ ’ಎಂದು ಎಂಟು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

ಪ್ರತ್ಯೇಕ ಆದೇಶವನ್ನು ಹೊರಡಿಸಿದ ನ್ಯಾ.ಬಿ.ವಿ.ನಾಗರತ್ನಾ ಅವರು,ಪುನರ್ಪರಿಶೀಲನೆ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಸುಪ್ರೀಂ ಕೋರ್ಟ್ ನಿಯಮಗಳು 2013ರ ಆದೇಶ XLVII ನಿಯಮ 1ರಡಿ ಪುನರ್ಪರಿಶೀಲನೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ಜುಲೈ 25ರಂದು ತನ್ನ 8:1 ಬಹುಮತದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು,ಖನಿಜ ಹಕ್ಕುಗಳಿಗೆ ತೆರಿಗೆಯನ್ನು ವಿಧಿಸುವ ಶಾಸಕಾಂಗ ಅಧಿಕಾರವನ್ನು ರಾಜ್ಯಗಳು ಹೊಂದಿವೆ ಮತ್ತು ಖನಿಜಗಳ ಮೇಲೆ ಪಾವತಿಸಲಾದ ರಾಯಧನವು ತೆರಿಗೆಯಲ್ಲ ಎಂದು ಎತ್ತಿಹಿಡಿದಿತ್ತು.

ಆ.14ರಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಜುಲೈ 25ರ ತೀರ್ಪಿನ ಸೀಮಿತ ಪೂರ್ವಾನ್ವಯಕ್ಕೆ ಅವಕಾಶ ನೀಡುವ ಮೂಲಕ ಎಪ್ರಿಲ್ 1,2005ರಿಂದ ಯಾವುದೇ ಬಡ್ಡಿ ಅಥವಾ ದಂಡವಿಲ್ಲದೆ ತೆರಿಗೆ ಬಾಕಿಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಅನುಮತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News