ರೈಲ್ವೆಯ ಆಡಳಿತಾತ್ಮಕ ಕಾರ್ಯಗಳನ್ನು ಹಳಿ ತಪ್ಪಿಸಿದ ಇ-ಕಚೇರಿ ಸ್ಥಗಿತ

Update: 2024-10-05 10:55 GMT

ಸಾಂದರ್ಭಿಕ ಚಿತ್ರ | freepik

ಹೊಸದಿಲ್ಲಿ: ರೇಲ್ಟೆಲ್ ನ ಉತ್ಪನ್ನವಾದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ದ ಇ-ಕಚೇರಿ ಸ್ಥಗಿತಗೊಂಡ ಬಳಿಕ ಸುಮಾರು ಒಂದು ವಾರದವರೆಗೆ ಭಾರತೀಯ ರೈಲ್ವೆಯಾದ್ಯಂತ ದೈನಂದಿನ ಆಡಳಿತಾತ್ಮಕ ಕಾರ್ಯಗಳು ಹಳಿ ತಪ್ಪಿದ್ದವು.

ಅಧಿಕೃತ ಮೂಲಗಳ ಪ್ರಕಾರ, ಇ-ಆಫೀಸ್ ವ್ಯವಸ್ಥೆಯು ವಿಫಲಗೊಂಡ ಬಳಿಕ ರೈಲ್ವೆಯಲ್ಲಿ ಸಂಪೂರ್ಣ ಕಡತ ಚಲನವಲನ ಮತ್ತು ಸಂಬಂಧಿತ ಸಂವಹನಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ತುರ್ತುಕಡತಗಳನ್ನು ಭೌತಿಕವಾಗಿ ನಿರ್ವಹಿಸಲಾಗಿತ್ತು. ಈ ಪ್ಲ್ಯಾಟ್ ಫಾರ್ಮ್ ಗೆ ಸ್ಥಳಾಂತರಗೊಂಡಿರುವ ಹಲವು ಇಲಾಖೆಗಳಲ್ಲಿ ರೈಲ್ವೆಯೂ ಒಂದಾಗಿದೆ.

ರೇಲ್ಟೆಲ್ ಶುಕ್ರವಾರ ಸಹಜ ಸ್ಥಿತಿಯನ್ನು ಮರುಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿದವು.

ವರ್ಕ್-ಫ್ಲೋ ಆಧಾರಿತ ಎನ್ಐಸಿ ಇ-ಕಚೇರಿಯು ಅಸ್ತಿತ್ವದಲ್ಲಿದ್ದ ಫೈಲ್ಗಳ ಭೌತಿಕ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿ ವಿದ್ಯುನ್ಮಾನ ವ್ಯವಸ್ಥೆಯೊಂದಿಗೆ ಬದಲಿಸಿದ್ದು,ದೇಶಾದ್ಯಂತ ಭಾರತೀಯ ರೈಲ್ವೆಯ 236ಕ್ಕೂ ಅಧಿಕ ಸಂಸ್ಥೆಗಳಲ್ಲಿ ಕಾರ್ಯಾಚರಣೆಯಲ್ಲಿದೆ ಮತ್ತು 1.47 ಲಕ್ಷ ಬಳಕೆದಾರರನ್ನು ಹೊಂದಿದೆ.

ಎನ್ಐಸಿ ಇ-ಕಚೇರಿಯು 4-5 ದಿನಗಳ ಕಾಲ ಸ್ಥಗಿತಗೊಂಡಿದ್ದನ್ನು ದೃಢಪಡಿಸಿದ ದಕ್ಷಿಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಸೆಂತಮಿಲ್ ಸೆಲ್ವನ್ ಅವರು,ಈ ಅವಧಿಯಲ್ಲಿ ತುರ್ತು ಆಡಳಿತಾತ್ಮಕ ಕಡತಗಳನ್ನು ಭೌತಿಕವಾಗಿ ನಿರ್ವಹಿಸಲಾಗಿತ್ತು. ಇ-ಕಚೇರಿ ಸ್ಥಗಿತಗೊಂಡಿದ್ದು ಪ್ರಯಾಣಿಕರ ಮತ್ತು ಸರಕು ಸಾಗಣೆ ರೈಲುಗಳ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ,ಏಕೆಂದರೆ ಈ ಸೇವೆಗಳ ನಿರ್ವಹಣೆಗಾಗಿ ರೈಲ್ವೆಯು ಸ್ವತಂತ್ರ ಮತ್ತು ಸಮರ್ಪಿತ ಐಟಿ ಮೂಲಸೌಕರ್ಯವನ್ನು ಹೊಂದಿದೆ. ರೇಲ್ಟೆಲ್ ರೈಲ್ವೆ ಸಚಿವಾಲಯದ ಪರವಾಗಿ ಇ-ಕಚೇರಿಯನ್ನು ನಿರ್ವಹಿಸುತ್ತಿದೆ ಮತ್ತು ದಕ್ಷಿಣ ರೈಲ್ವೆ ಅದರ ಬಳಕೆದಾರರಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಸಿಸ್ಟಮ್ ಗಳು ಏಕೆ ಸ್ಥಗಿತಗೊಂಡಿದ್ದವು ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ ರೈಲ್ವೆ ಅಧಿಕಾರಿಗಳು,ಐಕ್ಲೌಡ್ ನಲ್ಲಿ ಸಂಗ್ರಹಿತ ಬ್ಯಾಕಪ್ ಡೇಟಾದ ಸುರಕ್ಷತೆಯ ಬಗ್ಗೆ ಮತ್ತು ಸೇವೆಗಳ ಮರುಸ್ಥಾಪನೆಯ ಬಳಿಕ ಅದು ಸಂಪೂರ್ಣವಾಗಿ ಲಭ್ಯವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಇ-ಕಚೇರಿಯು ರೈಲ್ವೆಯಲ್ಲದೆ,ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ,ಐಆರ್ಸಿಟಿಸಿ,ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ರೇಲ್ ವಿಕಾಸ ನಿಗಮ ನಿ.ಸೇರಿದಂತೆ ಹಲವಾರು ಸರಕಾರಿ ಸಂಸ್ಥೆಗಳಿಗೆ ಸೇವೆಗಳನ್ನು ಒದಗಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News