34 ವರ್ಷ ಹಿಂದಿನ ಅತ್ಯಾಚಾರ ಪ್ರಕರಣ ರದ್ದುಪಡಿಸಿದ ಸುಪ್ರೀಂಕೋರ್ಟ್

Update: 2024-01-18 06:02 GMT

ಹೊಸದಿಲ್ಲಿ: ʼಮೀಟೂʼ ಚಳವಳಿ ಆರಂಭಕ್ಕೆ ಎರಡು ವರ್ಷ ಮುನ್ನ ಮಹಿಳೆಯೊಬ್ಬರು 2016ರಲ್ಲಿ ಅಸ್ಸಾಂನ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. 1982ರಲ್ಲಿ ತಾನು ಅಪ್ರಾಪ್ತೆಯಾಗಿದ್ದಾಗ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಇದರ ಪರಿಣಾಮ 1983ರಲ್ಲಿ ತಾನು ಗಂಡುಮಗುವಿಗೆ ಜನ್ಮ ನೀಡಿದ್ದಾಗಿ ಮಹಿಳೆ ಆಪಾದಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕಮ್ರುಪ್ ಜಿಲ್ಲಾ ನ್ಯಾಯಾಲಯ ಮತ್ತು ಗುವಾಹತಿ ಹೈಕೋರ್ಟ್ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದ್ದವು.

ಆಪಾದಿತ ವ್ಯಕ್ತಿ, ಈ ಮಗು ತಮ್ಮ ಸಹಮತದ ಲೈಂಗಿಕತೆಯಿಂದ ಜನಿಸಿದ್ದು ಎಂದು ವಾದಿಸಿ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ನ ಮೆಟ್ಟಲೇರಿದ್ದರು. ಘಟನೆ ನಡೆದ 34 ವರ್ಷಗಳ ಬಳಿಕ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ರದ್ದುಪಡಿಸಿದೆ. ಅಪರೂಪದ ಪ್ರಕರಣಗಳಲ್ಲಿ ಸಂವಿಧಾನ ಕೋರ್ಟ್ ಗಳು ಮಾತ್ರ ಇವು ಅನೂರ್ಜಿತಗೊಳಿಸಬಹುದಾದ ಪ್ರಕರಣಗಳು ಎಂದು ನಿರ್ಧರಿಸಿದಲ್ಲಿ ಪ್ರಕರಣ ರದ್ದುಪಡಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

"ಘಟನೆ ನಡೆದು 34 ವರ್ಷಗಳ ಬಳಿಕ ಪ್ರಕರಣ ದಾಖಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಅಪರಾಧ ನಡೆದಾಗ ಮಹಿಳೆ ಅಪ್ರಾಪ್ತ ವಯಸ್ಸಿನವರಾಗಿದ್ದರು ಎಂಬ ಹೇಳಿಕೆಯೊಂದಿಗೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕ್ರಿಯೆ ರದ್ದುಪಡಿಸಲು ಇದೊಂದೇ ನೆಲೆ ಸಾಕು" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

"ಮಹಿಳೆ 34 ವರ್ಷಗಳ ಕಾಲ ಮೌನವಾಗಿರಲು ಕಾರಣ ಏನು ಎಂಬ ಬಗ್ಗೆ ಎಫ್ಐಆರ್ ನಲ್ಲಿ ಯಾವುದೇ ಮಾಹಿತಿ ಇಲ್ಲ. ಗಂಡುಮಗುವನ್ನು ಪಡೆದಿದ್ದಾರೆ ಎನ್ನಲಾದ ಈ ಸಂಬಂಧ ಪರಸ್ಪರ ಸಹಮತದ ಲೈಂಗಿಕತೆ ಎನ್ನುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಈ ವ್ಯಕ್ತಿ ಮಗುವಿಗೆ ಹಣಕಾಸು ನೆರವು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ" ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News