ಪೌರತ್ವ ಕಾಯ್ದೆಯ 6ಎ ಪರಿಚ್ಛೇದ ಭಾರತದ ಇತಿಹಾಸದೊಂದಿಗೆ ಮಿಳಿತವಾಗಿದೆ: ಸುಪ್ರೀಂ ಕೋರ್ಟ್

Update: 2023-12-06 15:04 GMT

ಸುಪ್ರೀಂ ಕೋರ್ಟ್ | Photo: PTI  

ಹೊಸದಿಲ್ಲಿ : ಪಾಕಿಸ್ತಾನದಿಂದ ಬಾಂಗ್ಲಾದೇಶ ಬೇರ್ಪಟ್ಟ ಬಳಿಕ, ಮಾನವೀಯತೆಯ ಆಧಾರದಲ್ಲಿ 1985ರಲ್ಲಿ 1955ರ ಪೌರತ್ವ ಕಾಯ್ದೆಗೆ 6ಎ ಪರಿಚ್ಛೇದವನ್ನು ಸೇರ್ಪಡೆಗೊಳಿಸಲಾಗಿದೆ ಹಾಗೂ ಈ ಪರಿಚ್ಛೇದವು ಭಾರತದ ಇತಿಹಾಸದೊಂದಿಗೆ ಆಳವಾಗಿ ಬೆಸೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಈ ಪರಿಚ್ಛೇದವನ್ನು ಅಕ್ರಮ ವಲಸಿಗರಿಗೆ ನೀಡಲಾಗುವ ಕ್ಷಮಾದಾನದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮೌಖಿಕವಾಗಿ ಹೇಳಿದ್ದಾರೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.

ಮುಖ್ಯ ನ್ಯಾಯಾಧೀಶರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ಪೌರತ್ವ ಕಾಯ್ದೆಯ 6ಎ ಪರಿಚ್ಛೇದವನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು.

ಕೇಂದ್ರ ಸರಕಾರ ಮತ್ತು ಅಸ್ಸಾಮ್ ಚಳವಳಿಯ ನಾಯಕರ ನಡುವೆ 1985ರಲ್ಲಿ ಅಸ್ಸಾಮ್ ಒಪ್ಪಂದ ಏರ್ಪಟ್ಟಾಗ, ಪೌರತ್ವ ಕಾಯ್ದೆಯ ವಿಶೇಷ ವಿಧಿಯಾಗಿ 6ಎಯನ್ನು ಸೇರ್ಪಡೆಗೊಳಿಸಲಾಯಿತು. 1966 ಜನವರಿ 1ರಿಂದ 1971 ಮಾರ್ಚ್ 25ರ ನಡುವೆ ಅಸ್ಸಾಮ್‌ಗೆ ಬಂದಿರುವ ವಿದೇಶೀಯರು ಭಾರತೀಯ ಪೌರತ್ವವವನ್ನು ಕೋರಲು ಈ ವಿಧಿಯು ಅವಕಾಶ ನೀಡುತ್ತದೆ.

ಪೌರತ್ವ ಕಾಯ್ದೆಯ ಈ ವಿಧಿಯು ಬಾಂಗ್ಲಾದೇಶಿ ವಲಸಿಗರ ಅಕ್ರಮ ಪ್ರವೇಶವನ್ನು ಕಾನೂನುಬದ್ಧಗೊಳಿಸುತ್ತದೆ ಎಂಬುದಾಗಿ ಅಸ್ಸಾಮ್‌ನ ಬುಡಕಟ್ಟು ಗುಂಪುಗಳು ಆರೋಪಿಸಿವೆ.

ಈ ವಿಧಿಯು ಅಸ್ಸಾಮ್‌ನ ‘‘ಜನಸಂಖ್ಯಾ ಸ್ವರೂಪದ ಮೇಲೆ ದಾಳಿ ಮಾಡುತ್ತದೆ’’ ಮತ್ತು ರಾಜ್ಯದ ಸಂಸ್ಕೃತಿ, ಆರ್ಥಿಕತೆ, ರಾಜಕೀಯ ಮತ್ತು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂದು ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ವಕೀಲ ಶ್ಯಾಮ್ ದಿವಾನ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ಪರಿಚ್ಛೇದದ ಪ್ರಯೋಜನ ಪಡೆದಿರುವವರ ಸಂಖ್ಯೆಗೆ ಸಂಬಂಧಿಸಿದ ಅಧಿಕೃತ ಅಂಕಿ ಅಂಶಗಳನ್ನು ಸಲ್ಲಿಸುವಂತೆ ಸೂಚಿಸಿತು.

1966 ಮತ್ತು 1971ರ ನಡುವೆ ಅಸ್ಸಾಮ್ ರಾಜ್ಯವನ್ನು ಪ್ರವೇಶಿಸಿರುವ ವಲಸಿಗರಿಗೆ ಪೌರತ್ವ ನೀಡಿದ ಬಳಿಕ ರಾಜ್ಯದ ಜನಸಂಖ್ಯಾ ಸ್ವರೂಪ ಮತ್ತು ಸಾಂಸ್ಕೃತಿಕ ಗುರುತಿನಲ್ಲಿ ಬದಲಾವಣೆಯಾಗಿದೆಯೇ ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು.

ಪೌರತ್ವ ಕಾಯ್ದೆಯ 6ಎ ಪರಿಚ್ಛೇದದ ಪ್ರಯೋಜನವನ್ನು ಸುಮಾರು 5.45 ಲಕ್ಷ ಮಂದಿ ಪಡೆದುಕೊಂಡಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಅಧಿಕೃತ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ಶೀಘ್ರವೇ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಈ ವಿಚಾರಣೆಯ ಉದ್ದೇಶ ಆ ಪರಿಚ್ಛೇದವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆ ತೀರ್ಪು ನೀಡುವುದಲ್ಲ ಎಂದು ಹೇಳಿದ ನ್ಯಾಯಾಲಯ, 1966 ಮತ್ತು 1971ರ ನಡುವಿನ ಅವಧಿಯಲ್ಲಿ ಅದನ್ನು ಜಾರಿಗೊಳಿಸಿದಾಗ ಅದು ಸಾಂವಿಧಾನಿಕವಾಗಿತ್ತೇ ಎನ್ನುವುದನ್ನು ನಿರ್ಧರಿಸುವುದು ವಿಚಾರಣೆಯ ಉದ್ದೇಶವಾಗಿದೆ ಎಂದು ಹೇಳಿತು.

ಆ ವಿಧಿಯು ಸಾಂವಿಧಾನಿಕವಾಗಿತ್ತೇ ಎನ್ನುವುದನ್ನು ನಂತರದ ಬೆಳವಣಿಗೆಗಳ ಆಧಾರದಲ್ಲಿ ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿತು.

‘ಇತಿಹಾಸದ ಮಹತ್ವದ ಘಟನೆಯ ಬಳಿಕ ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತು’

‘‘ನಮ್ಮ ದೇಶದ ಇತಿಹಾಸದಲ್ಲಿ ದಾಖಲಾಗಿರುವ ಮಹತ್ವದ ಘಟನೆಯೊಂದರ ಅವಧಿಯಲ್ಲಿ 6ಎ ಪರಿಚ್ಛೇದವನ್ನು ಜಾರಿಗೊಳಿಸಲಾಗಿತ್ತು ಎನ್ನುವುದನ್ನು ನಾವು ನಿರಾಕರಿಸುವಂತಿಲ್ಲ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತ ಮಹತ್ವದ ಪಾತ್ರವನ್ನು ವಹಿಸಿತ್ತು. ಆ ಸಂದರ್ಭದಲ್ಲಿ ನಡೆದ ವಲಸೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಅದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬುದಾಗಿ ಅಂದು ಸಂಸತ್ತು ನಿರ್ಧರಿಸಿದಂತೆ ಕಾಣುತ್ತದೆ. ಅಂದಿನ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)ದ ಜನರ ಮೇಲೆ ನಡೆದ ಅಮಾನುಷ ದೌರ್ಜನ್ಯದ ಹಿನ್ನೆಲೆಯಲ್ಲಿ ಅಂದಿನ ಭಾರತೀಯ ಸಂಸತ್ತು ಆ ನಿರ್ಧಾರವನ್ನು ತೆಗೆದುಕೊಂಡಿರಬೇಕು’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News