ಜಾತ್ಯತೀತತೆ ಭಾರತೀಯ ಪ್ರಜಾಪ್ರಭುತ್ವದ ಸ್ಥಾಪಕ ಕಂಬ; ಈಗ ಅಧಿಕಾರದಲ್ಲಿರುವವರು ಅದನ್ನು ‘‘ಅಪಹಾಸ್ಯದ ವಿಷಯ’’ವಾಗಿಸಿದ್ದಾರೆ: ಸೋನಿಯಾ
ಹೊಸದಿಲ್ಲಿ: ಜಾತ್ಯತೀತತೆಯು ಭಾರತೀಯ ಪ್ರಜಾಪ್ರಭುತ್ವದ ಸ್ಥಾಪಕ ಕಂಬವಾಗಿದೆ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಆದರೆ ಈಗ ಅಧಿಕಾರದಲ್ಲಿರುವವರು ಅದನ್ನೊಂದು ‘‘ಅಪಹಾಸ್ಯದ ವಿಷಯ’’ವನ್ನಾಗಿಸಿದ್ದಾರೆ ಎಂದು ಹೇಳಿದರು.
‘‘ತಾವು ‘ಪ್ರಜಾಪ್ರಭುತ್ವ’ಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಹೇಳುತ್ತಾರೆ, ಆದರೆ, ಅದೇ ವೇಳೆ, ಪ್ರಜಾಪ್ರಭುತ್ವದ ಸುಗಮ ನಿರ್ವಹಣೆಯನ್ನು ಖಾತರಿಪಡಿಸುವ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುತ್ತಾರೆ. ನಮ್ಮ ದೇಶವನ್ನು ಸೌಹಾರ್ದತೆಯತ್ತ ಮುನ್ನಡೆಸುವ ಹಳಿಗಳನ್ನು ನಾಶಪಡಿಸಲಾಗುತ್ತಿದೆ. ಅದರ ಫಲಿತಾಂಶವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಸಮಾಜವು ಇಂದು ಹಿಂದೆಂದಿಗಿಂತಲೂ ಅಧಿಕ ಕೋಮು ಧ್ರುವೀಕರಣಗೊಂಡಿದೆ’’ ಎಂದು ‘ಮನೋರಮ ಯೀಯರ್ ಬುಕ್ 2024’ರಲ್ಲಿ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ.
‘‘ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಪರಸ್ಪರ ಪೂರಕವಾಗಿದೆ. ಅವುಗಳು ರೈಲು ಹಳಿಗಳಂತೆ. ಅವುಗಳು ಸರಕಾರಗಳನ್ನು ಸೌಹಾರ್ದ ಸಮಾಜದತ್ತ ಒಯ್ಯುತ್ತವೆ’’ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟರು.
ಜಾತ್ಯತೀತತೆಯನ್ನು ಹಲವು ವಿಧಗಳಲ್ಲಿ ವ್ಯಾಖ್ಯಾನಿಸಬಹುದಾಗಿದೆ. ಆದರೆ, ಮಹಾತ್ಮಾ ಗಾಂಧಿಯ ಪ್ರಸಿದ್ಧ ಚಿಂತನೆ ‘ಸರ್ವ ಧರ್ಮ ಸಮ ಭಾವ’ ಬಿಂಬಿಸುವ ಕಲ್ಪನೆಯು ಭಾರತಕ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.
‘‘ಗಾಂಧೀಜಿ ಎಲ್ಲಾ ಧರ್ಮಗಳಲ್ಲಿ ಏಕತೆಯನ್ನು ಕಂಡರು. ಭಾರತ ಬಹು-ಧಾರ್ಮಿಕ ಸಮಾಜವಾಗುವುದಕ್ಕೆ ಜವಾಹರಲಾಲ್ ನೆಹರೂ ಒತ್ತು ನೀಡಿದರು. ಹಾಗಾಗಿ, ಜಾತ್ಯತೀತ ದೇಶವೊಂದನ್ನು ಸ್ಥಾಪಿಸಲು ಅವರು ನಿರಂತರವಾಗಿ ಶ್ರಮಿಸಿದರು’’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ತನ್ನ ಲೇಖನದಲ್ಲಿ ಬರೆದಿದ್ದಾರೆ.