ಮಿಜೋರಾಂ ಗಡಿ ಬಳಿ ಮ್ಯಾನ್ಮಾರ್ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ; 21 ನಾಗರಿಕರಿಗೆ ಗಾಯ
ಹೊಸದಿಲ್ಲಿ: ಮಿಜೋರಾಂ ಗಡಿಯ ಸಮೀಪ ರವಿವಾರ ಮ್ಯಾನ್ಮಾರ್ ಸೇನೆ ಮತ್ತು ಉಗ್ರರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ 21 ನಾಗರಿಕರು ಗಾಯಗೊಂಡಿದ್ದಾರೆ. ಮಿಜೋರಾಂ ಮ್ಯಾನ್ಮಾರ್ ಜೊತೆ 404 ಕಿ.ಮೀ.ಉದ್ದದ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.
ಗಾಯಾಳುಗಳಲ್ಲಿ ಭಾರತದಲ್ಲಿನ ಇಬ್ಬರು ನಿರಾಶ್ರಿತರು ಮತ್ತು 19 ಮ್ಯಾನ್ಮಾರ್ ನಾಗರಿಕರು ಸೇರಿದ್ದು,ಅವರನ್ನು ಮಿಜೋರಮ್ ನ ಚಂಫಾಯಿ ಜಿಲ್ಲೆಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಗ್ರರ ಗುಂಪನ್ನು ಮ್ಯಾನ್ಮಾರ್ ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ರೂಪುಗೊಂಡಿರುವ ʼಚಿನ್ಲ್ಯಾಂಡ್ ಡಿಫೆನ್ಸ್ ಫೋರ್ಸ್ʼ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. 2021ರಲ್ಲಿ ದಂಗೆಯ ಬಳಿಕ ಸೇನೆಯು ಮರಳಿ ಅಧಿಕಾರಕ್ಕೆ ಬಂದಿತ್ತು.
ಭಾರತವು ಮ್ಯಾನ್ಮಾರ್ ಜೊತೆ ಹಂಚಿಕೊಂಡಿರುವ ಪ್ರಮುಖ ವ್ಯಾಪಾರ ಮಾರ್ಗಗಳಲ್ಲೊಂದಾಗಿರುವ ಜೋಖಾವಥರ್-ರಿಖಾವ್ಡಾರ್ ಗಡಿಯಲ್ಲಿ ರವಿವಾರ ರಾತ್ರಿ 10:30ರ ಸುಮಾರಿಗೆ ಆರಂಭಗೊಂಡಿದ್ದ ಗುಂಡಿನ ಕಾಳಗ ಸೋಮವಾರ ಬೆಳಿಗ್ಗೆಯವರೆಗೂ ಮುಂದುವರಿದಿತ್ತು.
ಗುಂಡಿನ ಕಾಳಗದಿಂದ ಭೀತ ನೂರಾರು ಜನರು ಸ್ಥಳದಿಂದ ಸುಮಾರು ಒಂದು ಕಿ.ಮೀ.ದೂರದ ಜೋಖಾವಥರ್ ಗ್ರಾಮದಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಯಂಗ್ ಮಿಜೋ ಅಸೋಸಿಯೇಷನ್ ನಾಯಕ ಥಂಕುಂಗಾ ಪಚುವಾ ಸುದ್ದಿಸಂಸ್ಥೆಗೆ ತಿಳಿಸಿದರು.