ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಶರದ್ ಪವಾರ್

Update: 2024-11-05 15:01 GMT

 ಶರದ್ ಪವಾರ್ | PC : PTI  

ಹೊಸದಿಲ್ಲಿ : ರಾಜಕೀಯದಿಂದ ನಿವೃತ್ತಿಯಾಗುವ ಕುರಿತು ಎನ್ಸಿಪಿ ನಾಯಕ ಶರದ್ ಪವಾರ್ ಅವರು ಮಂಗಳವಾರ ಸುಳಿವು ನೀಡಿದ್ದಾರೆ. ತನ್ನ ರಾಜ್ಯ ಸದಸ್ಯತ್ವದ ಅವಧಿಯು 18 ತಿಂಗಳುಗಳಲ್ಲಿ ಕೊನೆಗೊಳ್ಳಲಿದ್ದು, ಇನ್ನು ಮುಂದೆ ತಾನು ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲವೆಂದು ಅವರು ಘೋಷಿಸಿದ್ದಾರೆ.

83 ವರ್ಷದ ಶರದ್ಪವಾರ್ ಅರು ತನ್ನ ಪಕ್ಷದ ಭದ್ರಕೋಟೆಯಾಗಿರುವ ಪಶ್ಚಿಮ ಮಹಾರಾಷ್ಟ್ರದ ಬಾರಾಮತಿಯಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂದರ್ಭ ರಾಜಕಾರಣದಿಂದ ನಿವೃತ್ತಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು.

ನಾನು ಅಧಿಕಾರದಲ್ಲಿಲ್ಲ. ಇನ್ನು ಒಂದೂವರೆ ವರ್ಷದಲ್ಲಿ ನನ್ನ ರಾಜ್ಯಸಭಾ ಸದಸ್ಯತ್ವ ಕೊನೆಗೊಳ್ಳಸಲಿದೆ. ಭವಿಷ್ಯದಲ್ಲಿ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಎಲ್ಲೋ ಒಂದೆಡೆಗೆ ಬಂದು ನಿಲ್ಲಬೇಕಾಗಿದೆ ಎಂದವರು ಹೇಳಿದ್ದಾರೆ. ಶಾಸಕ ಹಾಗೂ ಸಂಸದನಾಗಿ ತನ್ನನ್ನು ಒಟ್ಟಾರೆ 14 ಬಾರಿ ಆಯ್ಕೆ ಮಾಡಿದ್ದಕ್ಕಾಗಿ ಅವರು ಬಾರಾಮತಿಯ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಪಕ್ಷವನ್ನು ಒಡೆದು ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿರುವ ತನ್ನ ಸೋದರನ ಪುತ್ರನಾದ ಅಜಿತ್ ಪವಾರ್ ಬಗ್ಗೆ ತನಗೆ ಯಾವುದೇ ವೈಯಕ್ತಿಕವಾಗಿ ಯಾವುದೇ ಸೇಡಿನ ಭಾವನೆಯಿಲ್ಲ. ಆತ ನಿಮ್ಮನ್ನು 30 ವರ್ಷಳ ಕಾಲ ಮುನ್ನಡೆಸಿದ್ದಾನೆ. ಇದೀಗ ನಾಯಕತ್ವದ ತಲೆಮಾರಿನಲ್ಲಿ ಬದಲಾವಣೆಯಾಗಬೇಕಾಗಿದೆ ಎಂದು ಶರದ್ ಪವಾರ್ ಹೇಳಿದರು.

ಬಾರಾಮತಿ ಕ್ಷೇತ್ರದಿಂದ ತನ್ನ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವ ತನ್ನ ಸೋದರನ ಮೊಮ್ಮಗ ಯುಗೇಂದ್ರ ಪವಾರ್ ನನ್ನು ತನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಮಾಡುವ ಸೂಚನೆಯನ್ನು ಅವರು ನೀಡಿದ್ದಾರೆ. ಮುಂದಿನ 30 ವರ್ಷಗಳ ಅವಧಿಗೆ ಯುವ ಹಾಗೂ ಸೃಜನಶೀಲ ನಾಯಕತ್ವವನ್ನು ಸಿದ್ಧಪಡಿಸುವ ಸಮಯವೀಗ ನನಗೆ ಬಂದೊದಗಿದೆ ಎಂದು ಅವರು ಹೇಳಿದರು.

ಈ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಮೆಯಲ್ಲಿ ಎನ್ಸಿಪಿಯು ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಸ್ಪರ್ಧಿಸುತ್ತಿದ್ದು, ಈ ಸಮಯದಲ್ಲೇ ಶರದ್ ಪವಾರ್ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವುದು ಮಹತ್ವವನ್ನು ಪಡೆದಿದೆ.

ಶರದ್ ಪವಾರ್ ಕುಟುಂಬದ ಭದ್ರಕೋಟೆಯೆನಿಸಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಯುಗೇಂದ್ರ ಪವಾರ್ ಎನ್ಸಿಪಿ (ಶರದ್ಪವಾರ್ ಬಣ) ಅಭ್ಯರ್ಥಿಯಾಗಿದ್ದಾರೆ. ಕಳೆದ ವರ್ಷ ಎನ್ಸಿಪಿಯಿಂದ ಬಂಡೆದ್ದು, ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದ ಅಜಿತ್ ಪವಾರ್ ಅವರು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಬಾರಾಮತಿ ಕ್ಷೇತ್ರದಿಂದ ಅಜಿತ್ ಪವಾರ್ ಅವರು ಐದು ಬಾರಿ ಶಾಸಕರಾಗಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಅವರಿಗೆ ಶರದ್ ಪವಾರ್ ಅವರ ಬೆಂಬಲವಿತ್ತು. ಆದರೆ ಈ ಸಲ ಅವರು ಮೊದಲ ಬಾರಿಗೆ ವಿಧಾನಸಬಾ ಚುನಾವಣೆಯನ್ನು ತನ್ನ ಬಣದ ಬ್ಯಾನರ್ ನಡಿ ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News