ಎನ್‌ಸಿಪಿ ಮಾನ್ಯತೆಗಾಗಿ ಮುಂದುವರಿದ ತಿಕ್ಕಾಟ: ಪಕ್ಷದ ಪುನರ್ ಸಂಘಟನೆಗೆ ಮುಂದಾದ ಶರದ್ ಪವಾರ್

Update: 2023-07-08 12:38 GMT

ಶರದ್ ಪವಾರ್ ( PTI )

ಮುಂಬೈ: ತಮ್ಮ ವಿರುದ್ಧ ಬಂಡೆದ್ದು, ಶಿವಸೇನೆ-ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಭಾಗಿಯಾಗಿರುವ ತಮ್ಮ ಸೋದರನ ಪುತ್ರ ಅಜಿತ್ ಪವಾರ್‌ರೊಂದಿಗೆ ಅಧಿಕಾರದ ತಿಕ್ಕಾಟ ಮುಂದುವರಿದಿರುವಾಗಲೇ, ತಮ್ಮ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮ್ಮ ಪರವಾಗಿ ಜನ ಬೆಂಬಲ ಕ್ರೋಡೀಕರಿಸಲು ಇಂದಿನಿಂದ ನಾಶಿಕ್‌ನಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ndtv.com ವರದಿ ಮಾಡಿದೆ.

82 ವರ್ಷ ವಯಸ್ಸಿನ ಶರದ್ ಪವಾರ್ ಅವರು ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅವರು ಬಂಡಾಯ ಎನ್‌ಸಿಪಿ ಶಾಸಕರಾದ ಛಗನ್ ಭುಜಬಲ್, ಧನಂಜಯ್ ಮುಂಡೆಮ್ ಹಾಗೂ ಇನ್ನಿತರ ಶಾಸಕರು ಪ್ರತಿನಿಧಿಸುತ್ತಿರುವ ವಿದರ್ಭ ಪ್ರಾಂತ್ಯದ ನಾಶಿಕ್, ಪುಣೆ, ಸೋಲಾಪುರ್ ಹಾಗೂ ಮತ್ತಿತರ ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ರಾಜ್ಯ ಸರ್ಕಾರದೊಂದಿಗೆ ಸೇರ್ಪಡೆಯಾಗಿರುವುದಕ್ಕೆ ಶಿವಸೇನೆಯ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸತತ ಎರಡನೇ ದಿನವಾದ ನಿನ್ನೆ ಸಂಜೆಯೂ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಭೇಟಿಯಾಗಿದ್ದರು. "ನಾನು ಮುಖ್ಯಮಂತ್ರಿಯಾಗಲು ಬಯಸುತ್ತಿದ್ದೇನೆ" ಎಂಬ ಅಜಿತ್ ಪವಾರ್ ಅವರ ಹೇಳಿಕೆಯೂ ರಾಜಕೀಯ ವಲಯಗಳಲ್ಲಿ ಕಂಪನ ಸೃಷ್ಟಿಸಿದೆ. ಸದ್ಯ ಏಕನಾಥ್ ಶಿಂದೆ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪ ಮುಖ್ಯಮಂತ್ರಿ ಹುದ್ದೆ ಹಂಚಿಕೊಂಡಿದ್ದಾರೆ.

ಈ ನಡುವೆ, ಅಜಿತ್ ಪವಾರ್ ನೇತೃತ್ವದ ಬಣವು ಚುನಾವಣಾ ಆಯೋಗದೆದುರು ಎನ್‌ಸಿಪಿಯ ಹೆಸರು ಹಾಗೂ ಚಿಹ್ನೆಗಾಗಿ ಹಕ್ಕು ಪ್ರತಿಪಾದಿಸಿದೆ. ಅವರ ಬಣಕ್ಕೆ 32 ಶಾಸಕರ ಬೆಂಬಲವಿದೆ ಎನ್ನಲಾಗಿದೆ. ಶರದ್ ಪವಾರ್ ಅವರಿಗೆ 14 ಶಾಸಕರ ಬೆಂಬಲವಿದೆ. ಆದರೆ, ಅಜಿತ್ ಪವಾರ್ ಬಣದ ಪ್ರತಿಪಾದನೆಯನ್ನು ಚುನಾವಣಾ ಆಯೋಗ ಮನ್ನಿಸಬೇಕಿದ್ದರೆ ಎನ್‌ಸಿಪಿಯ ಸಂಖ್ಯಾಬಲವಾದ 53ರಲ್ಲಿ ಮೂರನೆ ಎರಡರಷ್ಟು ಶಾಸಕರ ಬೆಂಬಲವನ್ನು ಹೊಂದಲು ಇನ್ನೂ ಇಬ್ಬರು ಶಾಸಕರ ಬೆಂಬಲ ಅದಕ್ಕೆ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News