ಸಿಖ್ ಹತ್ಯಾಕಾಂಡ: ಜಗದೀಶ್ ಟೈಟ್ಲರ್‌ಗೆ ನಿರೀಕ್ಷಣಾ ಜಾಮೀನು

Update: 2023-08-04 15:55 GMT

ಜಗದೀಶ್ ಟೈಟ್ಲರ್‌

ಹೊಸದಿಲ್ಲಿ: 1984ರ ಸಿಖ್ ವಿರೋಧಿ ಗಲಭೆಗಳ ಸಂದರ್ಭ ಪುಲ್ ಬಂಗಾಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯ ಶುಕ್ರವಾರ ಕಾಂಗ್ರೆಸ್‌ನ ಮಾಜಿ ನಾಯಕ ಜಗದೀಶ್ ಟೈಟ್ಲರ್‌ಗೆ ನಿರೀಕ್ಷಣಾ ಜಾಮೀನು ನೀಡಿದೆ.

ಪ್ರಕರಣದ ಪುರಾವೆಗಳನ್ನು ತಿರುಚ ಬಾರದು ಹಾಗೂ ತನ್ನ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು ಸೇರಿದಂತೆ ನಿರ್ದಿಷ್ಟ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ ಎಂದು ವರದಿಯಾಗಿದೆ.

ಗುರುವಾರ ಬೆಳಗ್ಗೆ ಜಗದೀಶ್ ಟೈಟ್ಲರ್ ಹಾಗೂ ಸಿಬಿಐ ಪರ ಹಾಜರಾಗಿದ್ದ ನ್ಯಾಯವಾದಿಗಳ ವಾದಗಳನ್ನು ಆಲಿಸಿದ್ದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಆದೇಶವನ್ನು ಆಗಸ್ಟ್ 4ರ ವರೆಗೆ ಕಾಯ್ದಿರಿಸಿದ್ದರು.

ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಬಿಐ, 1984 ನವೆಂಬರ್ 1ರಂದು ಅಝಾದ್ ಮಾರುಕಟ್ಟೆಯ ಪೌಲ್ ಬಂಗಾಶ ಗುರುದ್ವಾರದಲ್ಲಿ ಸೇರಿದ್ದ ಜನರನ್ನು ಜಗದೀಶ್ ಟೈಟ್ಲರ್ ಪ್ರಚೋದಿಸಿದ್ದರು. ಇದರಿಂದ ಗುರುದ್ವಾರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಠಾಕೂರ್ ಸಿಂಗ್, ಬಾದಲ್ ಸಿಂಗ್ ಹಾಗೂ ಗುರು ಚರಣ್ ಸಿಂಗ್ ಹತ್ಯೆಯಾಗಿದ್ದರು ಎಂದು ಹೇಳಿದೆ.

ಸಿಬಿಐ ಟೈಟ್ಲರ್ ಹಾಗೂ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯಿ ಸೆಕ್ಷನ್ 147, 109 ಹಾಗೂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಮೇ 20ರ ಸಿಬಿಐ ಆರೋಪ ಪಟ್ಟಿಯನ್ನು ಆಗಸ್ಟ್ 5ರಂದು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ನಗರ ನ್ಯಾಯಾಲಯ ಜುಲೈ 26ರಂದು ಜಗದೀಶ್ ಟೈಟ್ಲರ್‌ಗೆ ಸಮನ್ಸ್ ನೀಡಿತ್ತು.

ಸಿಕ್ಖ್ ಅಂಗರಕ್ಷಕರು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದ ಒಂದು ದಿನದ ಬಳಿಕ ಪುಲ್ ಬಂಗಾಶ ಪ್ರದೇಶದಲ್ಲಿ 1984 ನವೆಂಬರ್ 1ರಂದು ಮೂವರನ್ನು ಹತ್ಯೆಗೈಯಲಾಗಿತ್ತು ಹಾಗೂ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News