ರೇವ್ ಪಾರ್ಟಿಯಲ್ಲಿ ಹಾವು ಮತ್ತು ಹಾವಿನ ವಿಷ ಪತ್ತೆ: ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲು
ನೊಯ್ಡಾ: ನೊಯ್ಡಾದಲ್ಲಿ ಆಯೋಜನೆಗೊಂಡಿದ್ದ ರೇವ್ ಪಾರ್ಟಿಯನ್ನು ಗುರುವಾರ ಮಧ್ಯರಾತ್ರಿ ಭೇದಿಸಿರುವ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಹಾವನ್ನು ಹಿಡಿದುಕೊಂಡು, ಅದರೊಂದಿಗೆ ಆಟವಾಡುತ್ತಿರುವ ವಿಡಿಯೊದಲ್ಲಿ ಕಂಡು ಬಂದಿದ್ದ ಬಿಗ್ ಬಾಸ್ ಒಟಿಟಿ ಆವೃತ್ತಿಯ ವಿಜೇತ ಸ್ಪರ್ಧಿ ಎಲ್ವಿಶ್ ಯಾದವ್ ರನ್ನೂ ಹೆಸರಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ಈ ದಾಳಿಯ ಸಂದರ್ಭದಲ್ಲಿ ಐದು ನಾಗರ ಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ಪೊಲೀಸರು India Today ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಪೊಲೀಸರು ಪ್ರಶ್ನೆಗೊಳಪಡಿಸಿದಾಗ ಎಲ್ವಿಶ್ ಯಾದವ್ ಹೆಸರು ಮುನ್ನೆಲೆಗೆ ಬಂದಿದೆ. ವಿಚಾರಣೆಯ ಸಂದರ್ಭದಲ್ಲಿ ಬಿಗ್ ಬಾಸ್ ಒಟಿಟಿ ಆವೃತ್ತಿಯ ವಿಜೇತ ಎಲ್ವಿಶ್ ಯಾದವ್ ಅವರ ಪಾರ್ಟಿಗಳಿಗೆ ತಾವು ಹಾವುಗಳನ್ನು ಸರಬರಾಜು ಮಾಡುತ್ತಿದ್ದೆವು ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಎಲ್ವಿಶ್ ಯಾದವ್ ಹಾಗೂ ಮತ್ತಿತರ ದೃಶ್ಯ ನಿರ್ಮಾಣಕಾರರು ನೊಯ್ಡಾದ ತೋಟಗಳಲ್ಲಿ ಹಾವುಗಳು ಮತ್ತು ಹಾವಿನ ವಿಷದೊಂದಿಗೆ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದಾರೆ ಎಂದು ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ) ಸಂಘಟನೆಯ ಪ್ರಾಣಿ ಕಲ್ಯಾಣಾಧಿಕಾರಿ ಗೌರವ್ ಗುಪ್ತ ದೂರು ದಾಖಲಿಸಿದ ನಂತರ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.
ಈ ವ್ಯಕ್ತಿಗಳು ಕಾನೂನುಬಾಹಿರವಾಗಿ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಆ ಪಾರ್ಟಿಗಳಿಗೆ ಹಾವಿನ ವಿಷ ಹಾಗೂ ಇನ್ನಿತರ ಮಾದಕ ದ್ರವ್ಯಗಳನ್ನು ಸೇವಿಸಲು ವಿದೇಶಿ ಮಹಿಳೆಯರನ್ನು ಆಹ್ವಾನಿಸುತ್ತಿದ್ದಾರೆ ಎಂದೂ ಪಿಎಫ್‍ಎ ಅಧಿಕಾರಿ ಆರೋಪಿಸಿದ್ದಾರೆ. ಗೌರವ್ ಗುಪ್ತಾರ ಆರೋಪದ ಕುರಿತು ಮಾಹಿತಿ ಸ್ವೀಕರಿಸಿರುವ ಮನೇಕಾ ಗಾಂಧಿಯೊಂದಿಗೆ ಗುರುತಿಸಿಕೊಂಡಿರುವ ಪಿಎಫ್‍ಎ ಸಂಘಟನೆಯು, ಈ ಕುರಿತು ಎಲ್ವಿಶ್ ಯಾದವ್ ಅವರನ್ನು ಸಂಪರ್ಕಿಸಿದೆ.
ಆಗ ತಮ್ಮ ಏಜೆಂಟ್ ದೂರವಾಣಿ ಸಂಖ್ಯೆಯನ್ನು ಬಿಗ್ ಬಾಸ್ ಒಟಿಟಿ ಆವೃತ್ತಿಯ ವಿಜೇತ ಎಲ್ವಿಶ್ ಯಾದವ್ ನೀಡಿದ್ದು, ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ನೊಯ್ಡಾದ ಬ್ಯಾಂಕ್ವೆಟ್ ಹಾಲ್ ನಲ್ಲಿ ರೇವ್ ಪಾರ್ಟಿಯನ್ನು ಆಯೋಜಿಸುತ್ತಿರುವುದು ಹಾಗೂ ಅಲ್ಲಿಗೆ ಹಾವುಗಳನ್ನು ತರುತ್ತಿರುವುದರ ಕುರಿತು ಒಪ್ಪಿಕೊಂಡಿದ್ದಾನೆ.
ನಂತರ, ಈ ಸುಳಿವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನೊಯ್ಡಾ ಪೊಲೀಸರಿಗೆ ನೀಡಲಾಗಿದ್ದು, ಈ ಸುಳಿವನ್ನು ಆಧರಿಸಿ ಪೊಲೀಸರು ಬ್ಯಾಂಕ್ವೆಟ್ ಹಾಲ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಬಂಧಿತರಾಗಿರುವ ಎಲ್ಲ ಐವರೂ ದಿಲ್ಲಿ ನಿವಾಸಿಗಳಾಗಿದ್ದಾರೆ.