ಅಂಬೇಡ್ಕರ್ ನಗರ್ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯನ್ನು ಗೃಹ ಬಂಧನದಲ್ಲಿರಿಸಲಾಗಿದೆ: ಎಸ್‌ಪಿ, ಕಾಂಗ್ರೆಸ್ ಆರೋಪ

Update: 2024-05-26 08:00 GMT

Photo credit: abplive.com

ಅಂಬೇಡ್ಕರ್ ನಗರ್ (ಉತ್ತರ ಪ್ರದೇಶ): ಆಡಳಿತಾರೂಢ ಬಿಜೆಪಿ ಸರಕಾರದ ನಿರ್ದೇಶನದ ಮೇರೆಗೆ ಅಂಬೇಡ್ಕರ್ ನಗರ್ ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಲಾಲ್ಜಿ ವರ್ಮ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಶನಿವಾರ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆರೋಪಿಸಿವೆ.

ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಎಸ್ಪಿ ನಾಯಕ ಅರವಿಂದ್ ಕುಮಾರ್ ಸಿಂಗ್, ಅಂಬೇಡ್ಕರ್ ನಗರ್ ಜಿಲ್ಲಾಡಳಿತವು ಎಸ್ಪಿ ಅಭ್ಯರ್ಥಿಯನ್ನು ಗೃಹ ಬಂಧನದಲ್ಲಿರಿಸುವ ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದು, ಚುನಾವಣಾ ಆಯೋಗವು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ನ್ಯಾಯಸಮ್ಮತ ಮತದಾನವನ್ನು ಖಾತರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವರ್ಮ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. “ಆದರೆ, ವರ್ಮರ ನಿವಾಸದಲ್ಲಿ ಏನನ್ನೂ ಪತ್ತೆ ಮಾಡುವುದು ಪೊಲೀಸರಿಗೆ ಬೇಕಿರಲಿಲ್ಲ ಅಥವಾ ಅಲ್ಲಿ ಪೊಲೀಸರಿಗೆ ಏನೂ ದೊರೆಯಲೂ ಇಲ್ಲ. ಇದು ಲಾಲ್ಜಿ ವರ್ಮರ ಪ್ರಾಮಾಣಿಕ ವರ್ಚಸ್ಸಿಗೆ ಕುಂದು ತರುವ ಕೇಡಿತನದ ಕೃತ್ಯವಾಗಿದೆ. ತೀವ್ರ ಖಂಡನೀಯ ಕೃತ್ಯವಿದು! ಸೋಲುತ್ತಿರುವ ಬಿಜೆಪಿಯ ಹತಾಶೆಯಿದು” ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬಿಜೆಪಿ ಸರಕಾರವು ಸಂಭವನೀಯ ಪರಾಭವದಿಂದ ಎಷ್ಟು ಭೀತಗೊಂಡಿದೆಯೆಂದರೆ, ಅವರು ಬಹಿರಂಗವಾಗಿಯೇ ಸರ್ವಾಧಿಕಾರಕ್ಕಿಳಿದಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು ಟೀಕಿಸಿದೆ.

ಉಭಯ ಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ಜಿಲ್ಲಾಡಳಿತವು ನಿರಾಕರಿಸಿದೆ.

ಮೇ 25ರಂದು ನಡೆದಿದ್ದ ಆರನೆಯ ಹಂತದ ಚುನಾವಣೆಯಲ್ಲಿ ಅಂಬೇಡ್ಕರ್ ನಗರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News