ಶ್ರೀನಗರ: ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ನಮಾಝ್‌ಗೆ ಅನುಮತಿ ನಿರಾಕರಣೆ
ಶ್ರೀನಗರ: ಗಾಝಾದಲ್ಲಿ ಇಸ್ರೇಲ್ ಕ್ರಮದ ವಿರುದ್ಧ ಪ್ರತಿಭಟನೆಯ ಭೀತಿಯ ನಡುವೆ ನಗರದಲ್ಲಿರುವ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ನಮಾಝ್‌ಗೆ ಅನುಮತಿ ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ನೌಹಟ್ಟಾ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಗೆ ಬೀಗ ಹಾಕಲಾಗಿದೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮಸೀದಿಯ ಸುತ್ತಮುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಜಾಮೀಯಾ ಮಸೀದಿಯನ್ನು ಪದೇ ಪದೇ ಮುಚ್ಚುವುದು ಹಾಗೂ ಮಿರ್ವೈಜ್ ಅವರ ಗೃಹ ಬಂಧನ ಜಮ್ಮು ಹಾಗೂ ಕಾಶ್ಮೀರದ ಪರಿಸ್ಥಿತಿಯನ್ನು ತಿಳಿಸುತ್ತದೆ’’ ಎಂದು ಮಿರ್ವೈಝ್ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಹೇಳಿದೆ.
ತಮ್ಮ ಮೇಲಿನ ನಿಷೇಧ ಹಾಗೂ ನಿರ್ಬಂಧವನ್ನು ಲೆಕ್ಕಿಸದ ಕಾಶ್ಮೀರಿ ಜನರು ಫೆಲಸ್ತೀನ್ ಜನರೊಂದಿಗೆ ನಿಲ್ಲುತ್ತಾರೆ. ಯುದ್ಧ ಎಂದಿಗೂ ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ. ಅದು ಕೇವಲ ನಾಶ, ಹೆಚ್ಚು ಅಪನಂಬಿಕೆಯ ಸೃಷ್ಟಿ, ಅಭದ್ರತೆ, ಕ್ರೂರತೆಗೆ ಮಾತ್ರ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.