ಪ್ರಧಾನಿ, ಅದಾನಿ ವಿರುದ್ಧ ಹೇಳಿಕೆ: ಕಾಂಗ್ರೆಸ್ ನಾಯಕನ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಸುಪ್ರೀಂ ನಿರಾಕರಣೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಸಮೂಹದ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಅವರೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಬಿಜೆಪಿಯ ಯುವ ಘಟಕದ ನಾಯಕ ಅಕ್ಷಿತ್ ಅಗರ್ವಾಲ್ ಅವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಸಚಿನ್ ಚೌಧರಿ ಅವರ ವಿರುದ್ಧ ಎಪ್ರಿಲ್ ನಲ್ಲಿ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಗೆ ಹಾಗೂ ಬಿಜೆಪಿಯನ್ನು ಬೆಂಬಲಿಸುವವರಿಗೆ ಪ್ರಧಾನಿ ಅವರು ದೇವರಿದ್ದಂತೆ ಎಂದು ಅಗರ್ವಾಲ್ ಅವರು ದೂರಿನಲ್ಲಿ ಹೇಳಿದ್ದರು.
ತನ್ನ ವರ್ಗದ ಜನ, ಹಿಂದೂ ಹಾಗೂ ಇತರ ಧಾರ್ಮಿಕ ಸಂಘಟನೆಗಳ ಸದಸ್ಯರ ಭಾವನೆಗಳಿಗೆ ಚೌಧರಿ ಅವರು ಧಕ್ಕೆ ಉಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಎಫ್ಐಆರ್ ಅನ್ನು ಪ್ರಶ್ನಿಸಿ ಚೌಧರಿ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ತನ್ನ ಪದಗಳು ಸೆಕ್ಷನ್ 153-ಎ ಅಡಿ ಅನ್ವಯವಾಗುವುದಿಲ್ಲ. ಅವರ ಆರೋಪ ಅಸ್ಪಷ್ಟವಾಗಿದೆ.
ತನ್ನ ಮಾತುಗಳು ಕೋಮು ಸೌಹಾರ್ದವನ್ನು ಕದಡುತ್ತದೆ ಎಂದು ಅವರು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಸಚಿನ್ ಚೌಧರಿ ಪ್ರತಿಪಾದಿಸಿದ್ದರು. ಆದರೆ, ಉಚ್ಚ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿನ್ ಚೌಧರಿ ಸುಪ್ರೀಂ ಕೋರ್ಟ್ಗೆ ವಿಶೇಷ ರಜಾ ಕಾಲದ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಹಾಗೂ ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠ ಅವರ ಅರ್ಜಿಯನ್ನು ತಿರಸ್ಕರಿಸಿತು.