ಲೋಕಸಭಾ ಚುನಾವಣೆ ಫಲಿತಾಂಶದಂದು ಷೇರು ಮಾರುಕಟ್ಟೆ ಕುಸಿತ ಪ್ರಕರಣ: ವರದಿ ಸಲ್ಲಿಸಲು ಕೇಂದ್ರ, ಸೆಬಿಗೆ ಸೂಚಿಸಲು ಸುಪ್ರೀಂಕೋರ್ಟ್‌ಗೆ ಅರ್ಜಿ
ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಷೇರು ಮಾರುಕಟ್ಟೆಯಲ್ಲಿ ಉಂಟಾದ ಕುಸಿತಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಸೆಬಿಗೆ ಸೂಚಿಸಬೇಕೆಂದು ಕೋರಿ ವಕೀಲ ವಿಶಾಲ್ ತಿವಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಬಿಜೆಪಿ ಸ್ವಂತ ಬಲದಿಂದ ಬಹುಮತ ಪಡೆಯದು ಮತ್ತು ಅಧಿಕಾರದಲ್ಲುಳಿಯಲು ಮಿತ್ರಪಕ್ಷಗಳ ಬೆಂಬಲ ಅದಕ್ಕೆ ಬೇಕೆಂದು ಜೂನ್ 4ರಂದು ಪ್ರಕಟಗೊಂಡ ಲೋಕಸಭಾ ಚುನಾವಣೆಯ ಫಲಿತಾಂಶಗಳಲ್ಲಿ ತಿಳಿಯುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿತ್ತು. ಆ ದಿನ ಸೆನ್ಸೆಕ್ಸ್ 4,389.73 ಅಂಕಗಳು ಅಥವಾ ಶೇ 5.74ರಷ್ಟು ಕುಸಿತ ಕಂಡಿತ್ತು.
ಅಮೆರಿಕಾದ ಹಿಂಡೆನ್‌ಬರ್ಗ್ ಸಂಸ್ಥೆ ಅಧಾನಿ ಸಮೂಹದ ವಿರುದ್ಧ ಹಣಕಾಸು ಅವ್ಯವಹಾರಗಳ ಆರೋಪ ಹೊರಿಸಿದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಇಂಟರ್‌ಲೊಕ್ಯುಟರಿ ಅಪ್ಲಿಕೇಶನ್ ಮೂಲಕ ತಿವಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಅದಾನಿ ಪ್ರಕರಣದ ತನಿಖೆಯನ್ನು ಸೆಬಿ ಪೂರ್ಣಗೊಳಿಸಿದೆಯೇ ಎಂಬುದು ಪ್ರಸಕ್ತ ಸ್ಪಷ್ಟವಿಲ್ಲ ಹಾಗೂ ಸಾಮಾನ್ಯ ನಾಗರಿಕರು ಈ ಬಗ್ಗೆ ತಿಳಿಯುವ ಹಕ್ಕು ಹೊಂದಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ನಿಯಂತ್ರಣ ಅಗತ್ಯ ಎಂದು ಅದಾನಿ ಪ್ರಕರಣದಲ್ಲಿ ಕೋರ್ಟ್ ಹೇಳಿತ್ತೆಂಬುದನ್ನು ಉಲ್ಲೇಖಿಸಿದ ಅರ್ಜಿದಾರರು, ಎಕ್ಸಿಟ್ ಪೋಲ್ ಘೋಷಣೆ ನಂತರ ಷೇರು ಮಾರುಕಟ್ಟೆಯಲ್ಲಿ ಅಂಕಗಳ ಗಣನೀಯ ಏರಿಕೆಯಾದರೆ ಫಲಿತಾಂಶಗಳು ಪ್ರಕಟಗೊಂಡಾಗ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿತ್ತು ಎಂದು ಹೇಳಿದರು.