ಮುಂಬೈ: ಕ್ಯಾಂಪಸ್‌ನಲ್ಲಿ ರಾಮ ಮಂದಿರ ಸಮಾರಂಭದ ಆಚರಣೆಗೆ ನಿರ್ಬಂಧ ಕೋರಿದ್ದ ದಲಿತ ವಿದ್ಯಾರ್ಥಿಯ ಬಂಧನ

Update: 2024-02-02 10:50 GMT

ಸಾಂದರ್ಭಿಕ ಚಿತ್ರ 

ಮುಂಬೈ: ಕ್ಯಾಂಪಸ್‌ನಲ್ಲಿ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಚರಣೆಗೆ ಕಡಿವಾಣ ಹಾಕುವಂತೆ ಕೋರಿದ್ದ ದಲಿತ ವಿದ್ಯಾರ್ಥಿಯೋರ್ವನನ್ನು ಪೋಲಿಸರು ಬಂಧಿಸಿದ ಘಟನೆ ಇಲ್ಲಿಯ ಭಾರತೀಯ ಜನಸಂಖ್ಯಾ ಅಧ್ಯಯನ ಸಂಸ್ಥೆ (ಐಐಪಿಎಸ್)ಯಲ್ಲಿ ನಡೆದಿದೆ ಎಂದು thewire.in ವರದಿ ಮಾಡಿದೆ.

ಜ.22ರಂದು ಸಂಸ್ಥೆಯ ಬಲಪಂಥೀಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಂಭ್ರಮಾಚರಣೆಯ ಉನ್ಮಾದವು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಹಲವಾರು ಬಹುಜನ ವಿದ್ಯಾರ್ಥಿಗಳು ಆತಂಕಗೊಂಡಿದ್ದರು. ಹೀಗಾಗಿ ಕ್ಯಾಂಪಸ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಸಂಸ್ಥೆಯ ತಕ್ಷಣದ ಹಸ್ತಕ್ಷೇಪವನ್ನು ಕೋರಿ ವಿದ್ಯಾರ್ಥಿಗಳು ಐಐಪಿಎಸ್‌ನ ನಿರ್ದೇಶಕ ಎಸ್.ಕೆ.ಸಿಂಗ್ ಅವರಿಗೆ ಪತ್ರವನ್ನು ಬರೆದಿದ್ದರು. 35 ವಿದ್ಯಾರ್ಥಿಗಳು ಪತ್ರಕ್ಕೆ ಸಹಿ ಹಾಕಿದ್ದು,ಪತ್ರ ಬರೆದಿದ್ದನ್ನು ಗೌಪ್ಯವಾಗಿರಿಸಲಾಗಿತ್ತು.

ಆದರೆ ಮಧ್ಯಪ್ರವೇಶಿಸುವಲ್ಲಿ ಸಂಸ್ಥೆಯು ವಿಫಲಗೊಂಡಿತ್ತು. ಅಲ್ಲದೆ ಪತ್ರಕ್ಕೆ ಸಹಿ ಹಾಕಿದ್ದ ವಿದ್ಯಾರ್ಥಿಗಳ ಹೆಸರುಗಳನ್ನು ಬಹಿರಂಗಗೊಳಿಸಲಾಗಿತ್ತು. ಪ್ರತಿಭಟನಾ ಪತ್ರಕ್ಕೆ ಸಹಿಗಳನ್ನು ಹಾಕಲು ವಿದ್ಯಾಥಿಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿಯನ್ನು ಜ.22ರಂದು ಪೋಲಿಸರು ಬಂಧಿಸಿದ್ದರು.

ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮೋನ್ಮಾದದ ವಿರುದ್ಧ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದಕ್ಕಾಗಿ ಹಿರಿಯ ವಿದ್ಯಾರ್ಥಿಯೋರ್ವ ನೀಡಿದ್ದ ದೂರಿನ ಮೇರೆಗೆ ಪೋಲಿಸರು ಲಾತೂರ್ ಜಿಲ್ಲೆಯ ದಲಿತ ಸಮುದಾಯಕ್ಕೆ ಸೇರಿದ ಈ ವಿದ್ಯಾರ್ಥಿಯನ್ನು ಬಂಧಿಸಿದ್ದರು. ದಲಿತ ವಿದ್ಯಾರ್ಥಿ ಪೋಸ್ಟ್‌ನಲ್ಲಿ ಸಂಭ್ರಮವನ್ನು ಟೀಕಿಸಿದ್ದ. ವಾಸ್ತವದಲ್ಲಿ ಅದು ಸಹವಿದ್ಯಾರ್ಥಿಯೋರ್ವನ ಪೋಸ್ಟ್‌ನ ನಕಲು ಆಗಿತ್ತು. ಐಐಪಿಎಸ್ ಕ್ಯಾಂಪಸ್‌ನಲ್ಲಿ ಸಂಭ್ರಮಾಚರಣೆಯನ್ನು ಪ್ರತಿಭಟಿಸಿ ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಮಾಡಿದ್ದರು. ಆದರೆ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಪ್ರತ್ಯೇಕಿಸಿ ಬಂಧಿಸಲಾಗಿತ್ತು. ಪೋಸ್ಟ್ ಕೇವಲ ಒಂದು ನೆಪವಾಗಿತ್ತು ಎಂದು ಕೆಲವು ವಿದ್ಯಾರ್ಥಿಗಳು thewire.in ಸುದ್ದಿಸಂಸ್ಥೆಗೆ ತಿಳಿಸಿದರು.

ಸದ್ರಿ ವಿದ್ಯಾರ್ಥಿ ಹೇಗಿದ್ದರೂ ಶಿಸ್ತುಕ್ರಮಕ್ಕೆ ಗುರಿಯಾಗುತ್ತಾನೆ. ರಾಮ ಮಂದಿರ ಸಂಭ್ರಮಾಚರಣೆಯ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸುವ ಸದ್ರಿ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರ ಪ್ರಯತ್ನ ಅನೇಕ ವಿದ್ಯಾರ್ಥಿಗಳಿಗೆ ಮತ್ತು ಆಡಳಿತಕ್ಕೂ ಅಸಮಾಧಾನವನ್ನುಂಟು ಮಾಡಿತ್ತು ಎಂದು ಓರ್ವ ವಿದ್ಯಾರ್ಥಿ ಆರೋಪಿಸಿದ್ದಾನೆ. ಹಸ್ತಕ್ಷೇಪವನ್ನು ಕೋರಿ ನಿರ್ದೇಶಕರಿಗೆ ಬರೆಯಲಾಗಿದ್ದ ಪತ್ರಕ್ಕೆ ಈ ವಿದ್ಯಾರ್ಥಿಯೂ ಸಹಿ ಹಾಕಿದ್ದ.

ಐಐಪಿಎಸ್ ಬಹು ಸಾಂಸ್ಕೃತಿಕ ಕ್ಯಾಂಪಸ್ ಆಗಿದ್ದು,ಪ್ರತಿವರ್ಷ ಗಣೇಶ ಚತುರ್ಥಿ,ದಸರಾ,ಕ್ರಿಸ್‌ಮಸ್ ಇತ್ಯಾದಿಗಳನ್ನು ಆಚರಿಸಲಾಗುತ್ತದೆ. ಆದರೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯು ಮುಖ್ಯವಾಗಿ ವಿವಿಧ ಸಂಘಟನೆಗಳ ರಾಜಕೀಯ ಅಜೆಂಡಾ ಆಗಿದೆ. ಇದು ವಿದ್ಯಾರ್ಥಿಗಳ ಜಾತ್ಯತೀತ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ಸಂಭ್ರಮಾಚರಣೆಯು ದ್ವೇಷ ಮತ್ತು ಭೀತಿಯನ್ನು ಹರಡುವ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಒಡಕನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ಬರೆದಿದ್ದರು.

ಪತ್ರವನ್ನು ಆಡಳಿತವು ಕಡೆಗಣಿಸಿತ್ತು. ದಲಿತ ವಿದ್ಯಾರ್ಥಿಯ ಬಂಧನದ ಬಳಿಕ ರಾಮ ಮಂದಿರ ಸಂಭ್ರಮವನ್ನು ಆಚರಿಸುತ್ತಿದ್ದ ವಿದ್ಯಾರ್ಥಿಗಳ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಕ್ಕಾಗಿ ಪತ್ರಕ್ಕೆ ಸಹಿ ಹಾಕಿದ್ದ ಇತರ ವಿದ್ಯಾರ್ಥಿಗಳು ಕ್ಷಮೆ ಯಾಚಿಸಿ ನಿರ್ದೇಶಕರಿಗೆ ಇನ್ನೊಂದು ಪತ್ರವನ್ನು ಬರೆಯುವಂತೆ ಬಲವಂತಗೊಳಿಸಲಾಗಿತ್ತು.

ಎರಡು ದಿನಗಳ ಕಾಲ ತಮ್ಮ ಲಾಕಪ್‌ನಲ್ಲಿ ದಲಿತ ವಿದ್ಯಾರ್ಥಿಯನ್ನು ಇಟ್ಟುಕೊಂಡಿದ್ದ ಗೋವಂಡಿ ಪೋಲಿಸರು ಮೂರನೇ ದಿನ ಆರ್ಥರ್ ರೋಡ್ ಜೈಲಿಗೆ ರವಾನಿಸಿದ್ದರು.

ವಿದ್ಯಾರ್ಥಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ್ದು, ಆತ ಕ್ಯಾಂಪಸ್‌ಗೆ ಮರಳಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News