ವಿದ್ಯಾರ್ಥಿ ಸಾವು: ಕೇರಳ ಪಶುವೈದ್ಯಕೀಯ ವಿವಿ ಕುಲಪತಿಯನ್ನು ಅಮಾನತುಗೊಳಿಸಿದ ರಾಜ್ಯಪಾಲ
ತಿರುವನಂತಪುರ: ಇತ್ತೀಚಿಗೆ ವಿದ್ಯಾರ್ಥಿಯೋರ್ವನ ಸಾವಿಗೆ ಸಂಬಂಧಿಸಿದಂತೆ ವಯನಾಡಿನ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ(ಡಾ.) ಎಂ.ಆರ್.ಶಶೀಂದ್ರನಾಥ ಅವರನ್ನು ರಾಜ್ಯದಲ್ಲಿಯ ವಿವಿಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಶನಿವಾರ ಅಮಾನತುಗೊಳಿಸಿದ್ದಾರೆ.
ಎಂ.ಆರ್.ಶಶೀಂದ್ರನಾಥ ಅವರು ಫೆ.28ರಂದು ಸಲ್ಲಿಸಿರುವ ವರದಿಯು ಫೆ.18ರಂದು ವಿದ್ಯಾರ್ಥಿ ಸಿದ್ಧಾರ್ಥನ್ (20) ಸಾವಿಗೆ ಕಾರಣವಾಗಿದ್ದ ಬೆಳವಣಿಗೆಗಳ ಸಂದರ್ಭದಲ್ಲಿ ಕುಲಪತಿಗಳು ತನ್ನ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯವನ್ನು ತೋರಿಸಿದ್ದರು ಹಾಗೂ ಸಾರಾಸಗಟು ಕರ್ತವ್ಯಲೋಪವನ್ನು ಎಸಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಖಾನ್ ಅಮಾನತು ಆದೇಶದಲ್ಲಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಸರಕಾರಕ್ಕೆ ಸೂಚಿಸಿರುವ ಖಾನ್,ಇದಕ್ಕಾಗಿ ಕೇರಳ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ಗೆ ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಶಶೀಂದ್ರನಾಥ ಅವರು 2019,ಜು.23ರಂದು ವಿವಿಯ ಕುಲಪತಿಗಳಾಗಿ ನೇಮಕಗೊಂಡಿದ್ದರು.
ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ಪದವಿ ಕೋರ್ಸ್ ನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ ಸಿದ್ಧಾರ್ಥನ್ ಮೃತದೇಹ ಫೆ.18ರಂದು ಹಾಸ್ಟೆಲ್ನ ಬಾತ್ರೂಮಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕೆಲವು ಸ್ಥಳೀಯ ಎಸ್ಎಫ್ಐ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಪುತ್ರನ್ನು ಥಳಿಸಿ ಕೊಲೆ ಮಾಡಿದ್ದಾರೆಂದು ಆತನ ಕೆಲವು ಕಾಲೇಜು ಸಹಪಾಠಿಗಳು ತಮಗೆ ತಿಳಿಸಿದ್ದಾರೆ ಎಂದು ಸಿದ್ಧಾರ್ಥನ್ ಪೋಷಕರು ಆರೋಪಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಂತೆ ತನ್ನ ಮಗನ ಶರೀರದಲ್ಲಿ ಮೂರು ದಿನಗಳಷ್ಟು ಹಳೆಯ ಗಾಯಗಳಿದ್ದವು ಮತ್ತು ಆತನ ಹೊಟ್ಟೆ ಖಾಲಿಯಿತ್ತು, ಇದು ಆತನನ್ನು ಕ್ರೂರವಾಗಿ ಥಳಿಸಲಾಗಿತ್ತು ಮತ್ತು ಯಾವುದೇ ಆಹಾರವನ್ನು ನೀಡಿರಲಿಲ್ಲ ಎಂದು ಸೂಚಿಸುತ್ತದೆ ಎಂದು ಸಿದ್ಧಾರ್ಥನ್ ತಂದೆ ವಾದಿಸಿದ್ದಾರೆ.
ಪ್ರಕರಣವು ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದು, ಸಿಪಿಎಮ್ನ ವಿದ್ಯಾರ್ಥಿ ಘಟಕ ಎಸ್ಎಫ್ಐ ಸಿದ್ಧಾರ್ಥನ್ ಹತ್ಯೆ ನಡೆಸಿದೆ ಮತ್ತು ಸಿಪಿಎಂ ಪ್ರಕರಣದ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಆರೋಪಿಸಿವೆ.
ಎಸ್ಎಫ್ಐ ಆರೋಪಗಳನ್ನು ನಿರಾಕರಿಸಿದೆ. ಆರಂಭದಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೋಲಿಸರು ಬಳಿಕ 18 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಶುಕ್ರವಾರದವರೆಗೆ ಈ ಪೈಕಿ 11 ಆರೋಪಿಗಳನ್ನು ಬಂಧಿಸಲಾಗಿದೆ.
ಕಾಂಗ್ರೆಸ್ ಶನಿವಾರ ಎಲ್ಲ ಬ್ಲಾಕ್ ಮಟ್ಟಗಳಲ್ಲಿ ಪ್ರತಿಭಟನೆಯನ್ನು ನಡೆಸಿದೆ. ಸೋಮವಾರದಿಂದ ತಿರುವನಂತಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.