ಹಣ್ಣುಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆ
ಹೊಸದಿಲ್ಲಿ: ಭಾರತದಲ್ಲಿ ಕಳೆದ 8 ವರ್ಷಗಳಲ್ಲಿ ಆ್ಯಪಲ್, ಬಾಳೆಹಣ್ಣು, ಮಾವು, ಪಪ್ಪಾಯಿ, ಅನಾನಸು ಹಾಗೂ ಸಪೋಟಾ ಸೇರಿದಂತೆ ಹಣ್ಣುಗಳ ಉತ್ಪಾದನೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ. ಲಭ್ಯವಿರುವ ಇತ್ತೀಚೆಗಿನ ದತ್ತಾಂಶದ ಪ್ರಕಾರ 2021 ನವೆಂಬರ್ 11ರ ವರೆಗೆ 8 ತಿಂಗಳು ದೇಶದಲ್ಲಿ ಹಣ್ಣುಗಳ ಒಟ್ಟು ಉತ್ಪಾದನೆಯಲ್ಲಿ ಕೇವಲ ಶೇ. 17 ಬೆಳವಣಿಗೆಯಾಗಿದೆ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ದತ್ತಾಂಶ ಹೇಳಿದೆ.
2013-14 ಮತ್ತು 2021-22ರ ನಡುವೆ ಮೂರು ವರ್ಗದ ಹಣ್ಣುಗಳ ಉತ್ಪಾದನೆ ಕುಸಿದಿದೆ. ಅವುಗಳಲ್ಲಿ ಆ್ಯಪಲ್, ಸಪೋಟಾ ಹಾಗೂ ‘ಇತರ ಹಣ್ಣುಗಳು’ ಸೇರಿವೆ. ಈ ಉತ್ಪಾದನಾ ಇಳಿಕೆ ಆತಂಕಕಾರಿಯಾಗಿದೆ. ಇನ್ನೊಂದೆಡೆ ಆರೆಂಜ್, ಮುಸಂಬಿ ಹಾಗೂ ದ್ರಾಕ್ಷಿಯಂತಹ ಎರಡು ವರ್ಗಗಳ ಸಿಟ್ರಸ್ ಹಣ್ಣುಗಳ ಉತ್ಪಾದನೆ ಸಾಧಾರಣ ಬೆಳವಣಿಗೆಯಾಗಿದೆ.
ಹಣ್ಣುಗಳ ಉತ್ಪಾದನೆಯಲ್ಲಿ ಕುಸಿತವಾಗಿರುವುದಕ್ಕೆ ಹಣ್ಣಿನ ಕೃಷಿ ಪ್ರದೇಶ ಇಳಿಕೆಯಾಗಿರುವುದು ಪ್ರಮುಖ ಕಾರಣ. ಹಣ್ಣಿನ ಕೃಷಿಯ ಒಟ್ಟು ಪ್ರದೇಶ 2013-14 ರಲ್ಲಿ 71.2 ಲಕ್ಷ ಹೆಕ್ಟೇರ್ ಇದ್ದುದು, 2021-22ರಲ್ಲಿ 69.7 ಲಕ್ಷ ಹಕ್ಟೇರ್ಗೆ ಇಳಿಕೆಯಾಗಿದೆ.
ಇದು ಶೇ. 2.1 ಇಳಿಕೆ ಎಂದು ದತ್ತಾಂಶ ಹೇಳಿದೆ. ನಿರ್ದಿಷ್ಟವಾಗಿ ಹಣ್ಣಿನ ಕೃಷಿ ಪ್ರದೇಶದಲ್ಲಿ ಇಳಿಕೆಯಾಗಲು ಕಾರಣಗಳು ಏನು ಎಂಬುದಾಗಿ ಕೃಷಿ, ಪಶು ಸಂಗೋಪನೆ ಹಾಗೂ ಆಹಾರ ಪರಿಷ್ಕರಣೆಯ ಲೋಕಸಭೆಯ ಸ್ಥಾಯಿ ಸಮಿತಿ ಸಚಿವಾಲಯವನ್ನು ಪ್ರಶ್ನಿಸಿತು. ‘‘ರೈತರು ಹಣ್ಣಿನ ಕೃಷಿಯ ಬದಲಿಗೆ ಲಾಭದಾಯಕ ತೋಟಗಾರಿಕೆ ಬೆಳೆಯತ್ತ ಆಕರ್ಷಿತವಾಗುತ್ತಿದ್ದಾರೆ. ಕೀಟಗಳು, ರೋಗಗಳು ಹಾಗೂ ಅನಪೇಕ್ಷಿತ ಹವಾಮಾನ ಅಂಶಗಳಿಂದ ಬೆಳೆ ಉತ್ಪಾದನೆ ಕಡಿಮೆಯಾಗುತ್ತಿರುವುದು ರೈತರು ತೋಟಗಾರಿಕೆ ಬೆಳೆಯತ್ತ ಆಕರ್ಷಿತರಾಗಲು ಪ್ರಮುಖ ಕಾರಣ’’ ಎಂದು ಸಚಿವಾಲಯ ಸಮಿತಿಗೆ ತಿಳಿಸಿದೆ.