ಶಿವಲಿಂಗದ ಮೇಲಿನ ಚೇಳಿಗೆ ಪ್ರಧಾನಿ ಮೋದಿ ಹೋಲಿಕೆ: ಶಶಿ ತರೂರ್ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ಹೊಸದಿಲ್ಲಿ: 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ‘ಶಿವಲಿಂಗದ ಮೇಲಿನ ಚೇಳು’ ಹೇಳಿಕೆಗಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಕ್ರಿಮಿನಲ್ ಮಾನಹಾನಿ ದೂರಿನಲ್ಲಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಡೆ ನೀಡಿದೆ.
ಬಿಜೆಪಿ ನಾಯಕ ರಾಜೀವ ಬಬ್ಬರ್ ದಾಖಲಿಸಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ತರೂರ್ ಮಂಗಳವಾರ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು.
ಸರ್ವೋಚ್ಚ ನ್ಯಾಯಾಲಯವು ಮಾನಹಾನಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ತರೂರ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೂರುದಾರ ಬಬ್ಬರ್ ಮತ್ತು ದಿಲ್ಲಿ ಸರಕಾರಕ್ಕೆ ನೋಟಿಸ್‌ಗಳನ್ನು ಹೊರಡಿಸಿತು.
ತಮ್ಮ ವಿವರವಾದ ಉತ್ತರಗಳನ್ನು ಸಲ್ಲಿಸುವಂತೆ ಕಕ್ಷಿಗಳಿಗೆ ನಿರ್ದೇಶನ ನೀಡಿದ ನ್ಯಾ.ಹೃಷಿಕೇಶ ರಾಯ್ ಮತ್ತು ಆರ್.ಮಹಾದೇವನ್ ಅವರ ಪೀಠವು ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಿತು.
ಮಂಗಳವಾರ ವಿಚಾರಣೆ ಸಂದರ್ಭ ತರೂರ ಪರ ವಕೀಲ ಮುಹಮ್ಮದ್ ಅಲಿ ಖಾನ್ ಅವರು,ಸದುದ್ದೇಶದಿಂದ ನೀಡಿದ ಹೇಳಿಕೆಗಳಿಗೆ ಕ್ರಿಮಿನಲ್ ಹೊಣೆಗಾರಿಕೆಯಿಂದ ರಕ್ಷಿಸುವ ಮಾನನಷ್ಟ ಕಾನೂನಿನ ವಿನಾಯಿತಿ ನಿಬಂಧನೆಯು ತನ್ನ ಕಕ್ಷಿದಾರರ ಹೇಳಿಕೆಗೆ ಅನ್ವಯಿಸುತ್ತದೆ ಎಂದು ವಾದಿಸಿದರು.
2012ರಲ್ಲಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಕಾರವಾನ್ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿಯ ಹೇಳಿಕೆಯನ್ನೇ ತರೂರ್ ಪುನರುಚ್ಚರಿಸಿದ್ದರಷ್ಟೇ. ಲೇಖನವು ಮೋದಿಯವರನ್ನು ಶಿವಲಿಂಗದ ಮೇಲೆ ಕುಳಿತಿದ್ದ ಚೇಳಿಗೆ ಹೋಲಿಸಿ ಅನಾಮಧೇಯ ಆರೆಸ್ಸೆಸ್ ನಾಯಕರ ಹೇಳಿಕೆಯನ್ನು ಒಳಗೊಂಡಿತ್ತು ಎಂದೂ ಅವರು ವಾದಿಸಿದರು.
2018ರಲ್ಲಿ ತರೂರ್ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಸಂದರ್ಭ ಈ ಹೇಳಿಕೆಯನ್ನು ಉಲ್ಲೇಖಿಸಿದ್ದರು ಮತ್ತು ಅದನ್ನು ‘ಅದ್ಭುತ ರೂಪಕ’ ಎಂದು ಬಣ್ಣಿಸಿದ್ದರು ಎಂದು ಖಾನ್ ತಿಳಿಸಿದರು.
ಮಾನಹಾನಿ ಪ್ರಕರಣದಲ್ಲಿ ತನ್ನ ಹಾಜರಾತಿಯನ್ನು ಕಡ್ಡಾಯಗೊಳಿಸಿದ್ದ ದಿಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತರೂರ್ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.
ತನ್ನ ವಿರುದ್ಧದ ಮಾನಹಾನಿ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ತರೂರ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಆ.9ರಂದು ತಿರಸ್ಕರಿಸಿತ್ತು.