‘ಪಾಕಿಸ್ತಾನ’,‘ಒಳ ಉಡುಪು’ ಟೀಕೆಗಳಿಗಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ ತರಾಟೆ
ಹೊಸದಿಲ್ಲಿ : ಇತ್ತೀಚಿನ ನ್ಯಾಯಾಲಯದ ವಿಚಾರಣೆ ಸಂದರ್ಭಗಳಲ್ಲಿ ನ್ಯಾ.ವೇದವ್ಯಾಸಾಚಾರ್ ಶ್ರೀಷಾನಂದ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ವರದಿಯನ್ನು ಕೇಳಿದೆ. ನ್ಯಾ.ಶ್ರೀಷಾನಂದ ಅವರು ಭೂಮಾಲಿಕ ಮತ್ತು ಬಾಡಿಗೆದಾರ ನಡುವಿನ ವಿವಾದದ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಮುಸ್ಲಿಮ್ ಬಾಹುಳ್ಯದ ಪ್ರದೇಶವನ್ನು ‘ಪಾಕಿಸ್ತಾನ’ ಎಂದು ಉಲ್ಲೇಖಿಸಿದ್ದರು ಮತ್ತು ಪ್ರತ್ಯೇಕ ವಿಚಾರಣೆಯಲ್ಲಿ ಓರ್ವ ಮಹಿಳಾ ವಕೀಲರೋರ್ವರಿಗೆ ಸಂಬಂಧಿಸಿದಂತೆ ಸ್ತ್ರೀದ್ವೇಷಿ ಹೇಳಿಕೆಯನ್ನು ನೀಡಿದ್ದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವನ್ನು ವ್ಯಕ್ತಪಡಿಸಿತು. ನ್ಯಾಯಾಲಯ ಕಲಾಪಗಳ ಮೇಲೆ ಸಾಮಾಜಿಕ ಮಾಧ್ಯಮಗಳು ನಿಗಾ ಇರಿಸಿರುವಾಗ ಮತ್ತು ಅವುಗಳನ್ನು ಪ್ರಸಾರ ಮಾಡುತ್ತಿರುವಾಗ ನ್ಯಾಯಾಂಗದ ವ್ಯಾಖ್ಯಾನಗಳು ನ್ಯಾಯಾಲಯಗಳಿಂದ ನಿರೀಕ್ಷಿತ ಘನತೆಗೆ ಅನುಗುಣವಾಗಿರುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಅದು ಹೇಳಿತು.
’ನ್ಯಾಯಾಲಯದ ಕಲಾಪಗಳ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನೀಡಿದ ಹೇಳಿಕೆಗಳ ಕುರಿತು ಮಾಧ್ಯಮ ವರದಿಗಳತ್ತ ನಮ್ಮ ಗಮನವನ್ನು ಸೆಳೆಯಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ ಸೂಚನೆಗಳನ್ನು ಪಡೆದುಕೊಂಡು ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ನ್ನು ನಾವು ಕೋರುತ್ತೇವೆ ’ ಎಂದು ನ್ಯಾ.ಚಂದ್ರಚೂಡ್ ಹೇಳಿದರು. ನಾವೂ ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ವಿಧಿಸಬಹುದು ಎಂದರು.
ಎರಡು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ನ್ಯಾ.ಚಂದ್ರಚೂಡ್ ಆದೇಶಿಸಿದರು. ಈ ವಿಷಯದಲ್ಲಿ ಮುಂದಿನ ಬುಧವಾರ ವಿಚಾರಣೆ ನಡೆಯಲಿದೆ.
ನ್ಯಾ.ಶ್ರೀಷಾನಂದ ಅವರ ಹೇಳಿಕೆಗಳ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಆ.28ರಂದು ದೇಶದಲ್ಲಿ ಸಂಚಾರ ಶಿಸ್ತನ್ನು ಮೈಗೂಡಿಸುವ ಕುರಿತು ಮಾತನಾಡಿದ ಸಂದರ್ಭ ನ್ಯಾ.ಶ್ರೀಷಾನಂದ ಅವರು ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಉಲ್ಲೇಖಿಸಿದ್ದರು. ಹಿಂಸಾಚಾರದ ಬೆದರಿಕೆಯಿಂದಾಗಿ ಪ್ರದೇಶದಲ್ಲಿಯ ಪೋಲಿಸ್ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಪ್ರತಿ ಆಟೋದಲ್ಲಿಯೂ ಹತ್ತು ಜನರು ತುಂಬಿಕೊಂಡಿರುತ್ತಾರೆ. ಮೈಸೂರು ರಸ್ತೆಯ ಮೇಲ್ಸೇತುವೆ ಸಾಗುವ ಗೋರಿಪಾಳ್ಯದಿಂದ ಹೂವಿನ ಮಾರುಕಟ್ಟೆಯವರೆಗಿನ ಪ್ರದೇಶವು ಭಾರತದಲ್ಲಿಲ್ಲ,ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವಾಗಿದೆ,ಎಷ್ಟೇ ಕಟ್ಟುನಿಟ್ಟುನ ಪೋಲಿಸ್ ಅಧಿಕಾರಿಯನ್ನು ಅಲ್ಲಿ ನಿಯೋಜನೆ ಮಾಡಿದರೂ ಅವರನ್ನು ಅಲ್ಲಿ ಥಳಿಸಲಾಗುತ್ತದೆ ಎಂದು ನ್ಯಾ.ಶ್ರೀಷಾನಂದ ಹೇಳಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.
ಮತ್ತೊಂದು ವೀಡಿಯೊದಲ್ಲಿ ಎದುರು ಪಕ್ಷದ ವಕೀಲರಿಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಕ್ಕಾಗಿ ಮಹಿಳಾ ವಕೀಲರನ್ನು ತರಾಟೆಗೆತ್ತಿಕೊಂಡಿದ್ದ ನ್ಯಾ.ಶ್ರೀಷಾನಂದ,ಎದುರು ಪಕ್ಷದ ಬಗ್ಗೆ ಈ ಮಹಿಳಾ ವಕೀಲರಿಗೆ ತುಂಬ ಗೊತ್ತಿರುವಂತೆ ಕಾಣುತ್ತದೆ,ಅವರು ಎದುರು ಪಕ್ಷದವರ ಒಳಉಡುಪುಗಳ ಬಣ್ಣವನ್ನೂ ಹೇಳಬಹುದು ಎಂದು ಟೀಕಿಸಿದ್ದರು.
ಮಹಿಳಾ ವಕೀಲರನ್ನು ಗುರಿಯಾಗಿಸಿಕೊಂಡು ಹೇಳಿಕೆಗಾಗಿ ನ್ಯಾ.ಶ್ರೀಷಾನಂದ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ಗುರುವಾರ ಎಕ್ಸ್ ಪೋಸ್ಟ್‌ನಲ್ಲಿ ನ್ಯಾ.ಚಂದ್ರಚೂಡ್ ಅವರನ್ನು ಆಗ್ರಹಿಸಿದ್ದರು.
ನ್ಯಾಯಾಧೀಶರೋರ್ವರು ಭಾರತಿಯ ಪ್ರಜೆಗಳನ್ನು ಕೇವಲ ಅವರ ಧರ್ಮದ ಕಾರಣದಿಂದ ಪಾಕಿಸ್ತಾನಿಗಳು ಎಂದು ಕರೆದಿರುವುದು ಅಚ್ಚರಿಯನ್ನು ಮೂಡಿಸಿದೆ ಎಂದು ವಕೀಲ ಸಂಜಯ ಘೋಷ ಹೇಳಿದ್ದಾರೆ.
ಆದರೆ,‘ಕಾಂಗ್ರೆಸ್ ಸರಕಾರದ ಆಡಳಿತವಿರುವ ರಾಜ್ಯದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಬಹಿರಂಗವಾಗಿ ಖಂಡಿಸಿದ್ದಕ್ಕಾಗಿ’ ನ್ಯಾಯಾಧೀಶರನ್ನು ಪ್ರಶಂಸಿಸಿರುವ ಬಿಜೆಪಿ ನಾಯಕಿ ಪ್ರೀತಿ ಗಾಂಧಿ,ಅಲ್ಪಸಂಖ್ಯಾತರ ಬಾಹುಳ್ಯದ ಪ್ರದೇಶವಾಗಿರುವ ಬೆಂಗಳೂರು ಸಿಟಿ ಮಾರ್ಕೆಟ್ ಮತ್ತು ಗೋರಿಪಾಳ್ಯ ನಡುವಿನ ಪ್ರದೇಶದಲ್ಲಿ ಯಾರನ್ನಾದರನ್ನು ಹಿಡಿಯಲು ಪೋಲಿಸರು ಹೆದರುತ್ತಿದ್ದಾರೆ ಎಂದು ಹೇಳಿದ್ದಾರೆ.