ಎನ್‌ಜಿಟಿ | ಪಂಜಾಬ್ ಮೇಲಿನ 1,000 ಕೋಟಿ ರೂ. ದಂಡಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Update: 2024-09-20 16:52 GMT

ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : ಘನ ಮತ್ತು ದ್ರವ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿಫಲವಾಗಿರುವುದಕ್ಕಾಗಿ ಪಂಜಾಬ್ ಸರಕಾರದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಧಿಸಿರುವ 1,000 ಕೋಟಿ ರೂಪಾಯಿ ದಂಡಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ವಿಧಿಸಿದೆ.

ಮುಖ್ಯ ನ್ಯಾಯಾಧೀಶ ಧನಂಜಯ ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ಎನ್‌ಜಿಟಿಯ ಜುಲೈ 25ರ ಆದೇಶವನ್ನು ಅಮಾನತಿನಲ್ಲಿರಿಸಿತು. ಅದೇ ವೇಳೆ, ನ್ಯಾಯಮಂಡಳಿಯ ನಿರ್ದೇಶನಗಳನ್ನು ಉಲ್ಲಂಘಿಸಿರುವುದಕ್ಕಾಗಿ ನಿಮ್ಮ ವಿರುದ್ಧ ಯಾಕೆ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿ ವಿವರಣೆ ನೀಡುವಂತೆ ನ್ಯಾಯಾಲಯವು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಸೂಚಿಸಿತು.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು, ಎನ್‌ಜಿಟಿ ಆದೇಶದ ವಿರುದ್ಧ ಪಂಜಾಬ್ ಸರಕಾರ ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪಂಜಾಬ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದರು.

ತ್ಯಾಜ್ಯ ನಿರ್ವಹಣೆ ಕಾನೂನುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವುದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ತನ್ನ ಜುಲೈ 25ರ ಆದೇಶದಲ್ಲಿ ಪಂಜಾಬ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಹಲವಾರು ಎಚ್ಚರಿಕೆಗಳ ಹೊರತಾಗಿಯೂ ಗಂಭೀರ ಪರಿಸರ ಕಳವಳಗಳನ್ನು ನಿಭಾಯಿಸುವಲ್ಲಿ ರಾಜ್ಯವು ಪದೇ ಪದೇ ವಿಫಲವಾಗಿದೆ ಎಂದು ಎನ್‌ಜಿಟಿ ಆದೇಶ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News