‘ಟುಕ್ಡೆ ಟುಕ್ಡೆ’ ಗ್ಯಾಂಗ್ ಮತ್ತು ನಗರ ನಕ್ಸಲರು ನಡೆಸುತ್ತಿರುವ ಕಾಂಗ್ರೆಸ್ ಗಣಪತಿ ಪೂಜೆಯನ್ನೂ ದ್ವೇಷಿಸುತ್ತಿದೆ : ಮೋದಿ

Update: 2024-09-20 15:40 GMT

ನರೇಂದ್ರ ಮೋದಿ | PC : PTI 

ವಾರ್ಧಾ(ಮಹಾರಾಷ್ಟ್ರ : ದ್ವೇಷದ ಭೂತವು ಕಾಂಗ್ರೆಸ್ ಪಕ್ಷವನ್ನು ಪ್ರವೇಶಿಸಿದೆ ಎಂದು ಶುಕ್ರವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ‘ಅತ್ಯಂತ ಭ್ರಷ್ಟ’ ಪಕ್ಷ ಎಂದು ಬಣ್ಣಿಸಿದರು. ಕಾಂಗ್ರೆಸ್ ಪಕ್ಷವು ‘ಟುಕ್ಡೆ ಟುಕ್ಡೆ’ ಗ್ಯಾಂಗ್ ಮತ್ತು ನಗರ ನಕ್ಸಲರಿಂದ ನಡೆಸಲ್ಪಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ವಿರುದ್ಧ ದಾಳಿಯನ್ನು ಮುಂದುವರಿಸಿದ ಅವರು, 138 ವರ್ಷಗಳಷ್ಟು ಹಳೆಯ ಪಕ್ಷವು ಈಗ ಗಣಪತಿ ಪೂಜೆಯನ್ನು ದ್ವೇಷಿಸುತ್ತಿದೆ ಎಂದರು. ಮೋದಿ ಇತ್ತೀಚಿಗೆ ಹೊಸದಿಲ್ಲಿಯಲ್ಲಿಯ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನಿವಾಸಕ್ಕೆ ಭೇಟಿ ನೀಡಿ ಗಣಪತಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದು ರಾಜಕೀಯ ಎದುರಾಳಿಗಳಿಂದ ಟೀಕೆಗೆ ಗುರಿಯಾಗಿತ್ತು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಒಂದು ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಇಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, ನೀವು ಇಂದು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರಂತಹ ಮಹಾನ್ ವ್ಯಕ್ತಿಗಳು ಗುರುತಿಸಿಕೊಂಡಿದ್ದ ಪಕ್ಷವಲ್ಲ. ದ್ವೇಷದ ಭೂತವು ಇಡೀ ಕಾಂಗ್ರೆಸ್‌ನ್ನು ಆವರಿಸಿಕೊಂಡಿದೆ. ಇಂದಿನ ಕಾಂಗ್ರೆಸ್‌ನಲ್ಲಿ ದೇಶಪ್ರೇಮದ ಆತ್ಮ ಕೊನೆಯುಸಿರೆಳೆದಿದೆ ಎಂದು ಹೇಳಿದರು.

ಮೀಸಲಾತಿ ವ್ಯವಸ್ಥೆಯ ರದ್ದತಿ ಮತ್ತು ಸಿಖ್ ಸಮುದಾಯದ ಕುರಿತು ಅಮೆರಿಕದಲ್ಲಿ ತನ್ನ ಹೇಳಿಕೆಗಳಿಗಾಗಿ ಆಡಳಿತ ಮೈತ್ರಿಕೂಟದ ಟೀಕೆಗೆ ಗುರಿಯಾಗಿರುವ ಪಕ್ಷದ ಸಂಸದ ರಾಹುಲ್ ಗಾಂಧಿಯವರನ್ನು ಉಲ್ಲೇಖಿಸದೆ ಪ್ರಧಾನಿ ವಿದೇಶಗಳಲ್ಲಿ ಕಾಂಗ್ರೆಸ್ ನಾಯಕರ ಭಾಷಣಗಳಲ್ಲಿ ಭಾರತ ವಿರೋಧಿ ಅಜೆಂಡಾಗಳ ಕುರಿತು ಮಾತನಾಡಿದರು.

ಭ್ರಷ್ಟ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮತ್ತು ಅತ್ಯಂತ ಭ್ರಷ್ಟ ಕುಟುಂಬವು ಅದರ ‘ರಾಜ ಪರಿವಾರ’ವಾಗಿದೆ ಎಂದು ಗಾಂಧಿ ಕುಟುಂಬವನ್ನು ಹೆಸರಿಸದೆ ಹೇಳಿದ ಮೋದಿ, ಅದು ಗಣಪತಿ ಪೂಜೆಯನ್ನೂ ದ್ವೇಷಿಸುತ್ತದೆ. ನಾನು ಗಣೇಶ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರೆ ಅದನ್ನು ತುಷ್ಟೀಕರಣ ರಾಜಕೀಯ ಎಂದು ಕಾಂಗ್ರೆಸ್ ಟೀಕಿಸಿತ್ತು. ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಗಣಪತಿ ಬಾಪ್ಪಾನನ್ನು ಕಂಬಿಗಳ ಹಿಂದೆ ತಳ್ಳಲಾಗಿತ್ತು. ಗಣಪತಿ ಮೂರ್ತಿಯನ್ನು ಪೋಲಿಸ್ ವಾಹನದಲ್ಲಿ ಇಡಲಾಗಿತ್ತು ಎಂದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಮೌನವಾಗಿದ್ದವು ಮತ್ತು ಗಣಪತಿ ಬಾಪ್ಪಾನಿಗೆ ಅವಮಾನದ ಕುರಿತು ಮಾತನಾಡಲಿಲ್ಲ ಎಂದು ಮೋದಿ ಹೇಳಿದರು.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮೋದಿ, ಅವುಗಳ ಇಬ್ಬಂದಿತನದ ಕುರಿತು ನಾವು ಎಚ್ಚರಿಕೆಯಿಂದಿರಬೇಕು. ಸುಳ್ಳು ಮತ್ತು ವಂಚನೆ ಕಾಂಗ್ರೆಸ್‌ನ ವಿಶಿಷ್ಟ ಲಕ್ಷಣಗಳಾಗಿವೆ ಮತ್ತು ಮಹಾರಾಷ್ಟ್ರದ ಜನರು ಆ ಪಕ್ಷದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ರೈತರನ್ನು ಕೇವಲ ರಾಜಕೀಯ ಮತ್ತು ಭ್ರಷ್ಟಾಚಾರಕ್ಕಾಗಿ ಬಳಸಿಕೊಂಡಿತ್ತು ಎಂದು ಆರೋಪಿಸಿದ ಮೋದಿ, ರೈತರನ್ನು ನಾಶಗೊಳಿಸಿರುವ ಆ ಪಕ್ಷಕ್ಕೆ ಇನ್ನೊಂದು ಅವಕಾಶವನ್ನು ನಾವು ನೀಡಬಾರದು. ಕಳೆದ ವರ್ಷ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅದು ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News