ನೀಟ್ ಪ್ರಶ್ನೆಪತ್ರಿಕೆ ಸೋರಿಕೆ : 6 ಆರೋಪಿಗಳ ವಿರುದ್ಧ 2ನೇ ಆರೋಪಪಟ್ಟಿ ಸಲ್ಲಿಸಿದ ಸಿಬಿಐ
ಪಾಟ್ನಾ : 2024ರ ಪದವಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಶುಕ್ರವಾರ ಪಾಟ್ನಾದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಿದೆ. ಈ ಆರೋಪಪಟ್ಟಿಯಲ್ಲಿ ಅದು ಆರು ಆರೋಪಿಗಳನ್ನು ಹೆಸರಿಸಿದೆ.
ಎರಡನೇ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿರುವ ಆರೋಪಿಗಳೆಂದರೆ- ಬಲದೇವ್ ಕುಮಾರ್ ಯಾನೆ ಚಿಂಟು, ಸನ್ನಿ ಕುಮಾರ್, ಡಾ. ಅಹ್ಸಾನುಲ್ ಹಕ್ (ಓಯಸಿಸ್ ಸ್ಕೂಲ್‌ನ ಪ್ರಾಂಶುಪಾಲ ಹಾಗೂ 2024ರ ನೀಟ್ ಯುಜಿಯ ಹಝಾರಿಬಾಗ್ ನಗರ ಸಮನ್ವಯಕಾರ), ಮುಹಮ್ಮದ್ ಇಮ್ತಿಯಾಝ್ ಅಲಮ್ (ಓಯಸಿಸ್ ಸ್ಕೂಲ್‌ನ ಉಪ ಪ್ರಾಂಶುಪಾಲ ಹಾಗೂ ಕೇಂದ್ರದ ಸೂಪರಿಂಟೆಂಡೆಂಟ್), ಜಮಾಲುದ್ದೀನ್ ಯಾನೆ ಜಮಾಲ್ (ಹಝಾರಿಬಾಗ್‌ನ ಓರ್ವ ವರದಿಗಾರ) ಮತ್ತು ಅಮನ್ ಕುಮಾರ್ ಸಿಂಗ್.
ನಗರ ಸಮನ್ವಯಕಾರ ಡಾ. ಹಕ್ ನೀಟ್ ಯುಜಿ 2024 ಪ್ರಶ್ನೆಪತ್ರಿಕೆಯನ್ನು ಕದ್ದು ಸೋರಿಕೆ ಮಾಡಲು ಪರೀಕ್ಷಾ ಕೇಂದ್ರದ ಸೂಪರಿಂಟೆಂಡೆಂಟ್ ಮುಹಮ್ಮದ್ ಇಮ್ತಿಯಾಝ್ ಅಲಮ್ ಮತ್ತು ಇತರರೊಂದಿಗೆ ಸೇರಿ ಪಿತೂರಿ ಹೂಡಿದ್ದರು ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಆರೋಪಿಸಿದೆ