4 ಲಕ್ಷ ಪಾವತಿಸಿ, ಬಳಿಕ ಸಂಸತ್ತಿಗೆ ತೆರಳಿ: ಎಂಜಿನಿಯರ್ ರಶೀದ್ ಗೆ ದೆಹಲಿ ಹೈಕೋರ್ಟ್ ತಾಕೀತು

PC: x.com/barandbench
ಹೊಸದಿಲ್ಲಿ: ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ತೆರಳುವ ಪ್ರಯಾಣ ವೆಚ್ಚವಾಗಿ ನಾಲ್ಕು ಲಕ್ಷ ರೂ.ಗಳನ್ನು ತಿಹಾರ್ ಜೈಲಿನ ಅಧಿಕಾರಿಗಳಿಗೆ ಪಾವತಿಸುವಂತೆ ಜಮ್ಮು ಕಾಶ್ಮೀರ ಲೋಕಸಭಾ ಕ್ಷೇತ್ರದ ಬಂಧಿತ ಸಂಸದ ಅಬ್ದುಲ್ ರಶೀದ್ ಶೇಕ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ. ರಶೀದ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ನ್ಯಾಯಮೂರ್ತಿಗಳಾದ ಚಂದ್ರ ಧರಿ ಸಿಂಗ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರನ್ನೊಳಗೊಂಡ ನ್ಯಾಯಪೀಠ, ಬಂಧನದಲ್ಲಿರುವ ರಶೀದ್ ಅವರಿಗೆ ಏಪ್ರಿಲ್ 4ರವರೆಗೆ ಸಂಸತ್ ಕಲಾಪಕ್ಕೆ ಹಾಜರಾಗಲು ಮಾರ್ಚ್ 25ರಂದು ಅನುಮತಿ ನೀಡಿದೆ. ಅವರು ಕಲಾಪದಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ ಎಂಬ ಎನ್ಐಎ ಶಂಕೆಯನ್ನು ಹೈಕೋರ್ಟ್ ತಳ್ಳಿಹಾಕಿದೆ.
ರಶೀದ್ ಈಗಾಗಲೇ 1.4 ಲಕ್ಷ ರೂ.ಗಳನ್ನು ಪಾವತಿಸಿದ್ದು, ಬಾಕಿ ಹಣವನ್ನು ಮೂರು ದಿನಗಳ ಒಳಗಾಗಿ ಪಾವತಿಸುವುದಾಗಿ ಅವರ ವಕೀಲರು ತಿಳಿಸಿದರು. ಹಣ ಪಾವತಿಸಿದ ಬಳಿಕ ಅವರನ್ನು ಸಂಸತ್ತಿಗೆ ಕರೆದೊಯ್ಯಬೇಕು ಮತ್ತು ಈ ಆದೇಶದ ಉದ್ದೇಶಕ್ಕೆ ಸೋಲಾಗದಂತೆ ಖಾತರಿಪಡಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಒಟ್ಟು ವೆಚ್ಚವಾಗಲಿರುವ 8.7 ಲಕ್ಷ ರೂಪಾಯಿಗಳ ಪೈಕಿ ಕನಿಷ್ಠ ಶೇಕಡ 50ರಷ್ಟು ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿತು. ರಶೀದ್ ಕಲಾಪದಲ್ಲಿ ಪಾಲ್ಗೊಳ್ಳಲು ಮಾಡುವ ವೆಚ್ಚವನ್ನು ಮನ್ನಾ ಮಾಡುವಂತ ಮಾಡಿಕೊಂಡ ಮನವಿ ಬಗ್ಗೆ ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆ ಎನ್ಐಎಗೆ ನಿರ್ದೇಶನ ನೀಡಲಾಯಿತು.