ಮಧ್ಯಪ್ರದೇಶ | ಹೆರಿಗೆ ದಾಖಲಾತಿಗೆ ಎರಡೆರಡು ಬಾರಿ ನಕಾರ: ಕೈಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಶಿಶು ಮೃತ್ಯು

Update: 2025-03-29 13:20 IST
ಮಧ್ಯಪ್ರದೇಶ | ಹೆರಿಗೆ ದಾಖಲಾತಿಗೆ ಎರಡೆರಡು ಬಾರಿ ನಕಾರ: ಕೈಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಶಿಶು ಮೃತ್ಯು

Photo credit: bhaskarenglish.in

  • whatsapp icon

ಇಂದೋರ್: ಸರಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದು ಗರ್ಭಿಣಿ ಮಹಿಳೆಯನ್ನು ದಾಖಲಿಸಿಕೊಳ್ಳಲು ಎರಡು ಬಾರಿ ನಿರಾಕರಿಸಿದ್ದರಿಂದ, ಆ ಮಹಿಳೆಯು ಕೈಗಾಡಿಯಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಆದರೆ ನವಜಾತ ಶಿಶು ಮೃತಪಟ್ಟಿದೆ.

"ಮಹಿಳೆಗೆ ಸ್ಪಷ್ಟವಾಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದರೂ, ಹೆರಿಗೆಗೆ ಇನ್ನೂ ಸಮಯವಾಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಪಟ್ಟು ಹಿಡಿದರು" ಎಂದು ಆಕೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಈ ಘಟನೆ ಇಂದೋರ್‌ನಿಂದ ಸುಮಾರು 160 ಕಿಮೀ ದೂರವಿರುವ ಸೈಲಾನಾದಲ್ಲಿ ಮಾರ್ಚ್ 24ರ ಮಧ್ಯರಾತ್ರಿಯ ವೇಳೆ ನಡೆದಿದ್ದರೂ, ಗರ್ಭಿಣಿ ಮಹಿಳೆಯನ್ನು ಕೈಗಾಡಿಯಲ್ಲಿ ಸಾಗಿಸುತ್ತಿರುವ ಸಿಸಿಟಿವಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಲಾನಾದ ಬ್ಲಾಕ್‌ ವೈದ್ಯಕೀಯ ಅಧಿಕಾರಿ(ಬಿಡಿಒ)ಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಶುಶ್ರೂಷಕಿಯರಾದ ಚೇತನಾ ಚಾರೆಲ್ ಹಾಗೂ ಗಾಯತ್ರಿ ಪಾಟೀದಾರ್‌ರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಮೂಲಗಳ ಪ್ರಕಾರ, ಸೈಲಾನಾ ನಿವಾಸಿಯಾದ ಕೃಷ್ಣ ಗ್ವಾಲಾ ಎಂಬವರು ತಮ್ಮ ಪತ್ನಿ ನೀತು ಎಂಬ ಗರ್ಭಿಣಿ ಮಹಿಳೆಯನ್ನು ಮಾರ್ಚ್ 23ರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಸೈಲಾನಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.

ಈ ವೇಳೆ ಕರ್ತವ್ಯದಲ್ಲಿದ್ದ ಶುಶ್ರೂಷಕಿ ಚೇತನಾ, ಹೆರಿಗೆಗೆ ಇನ್ನೂ ಎರಡು ಮೂರು ದಿನ ಬಾಕಿ ಇದೆ ಎಂದು ಹೇಳಿ, ಅವರನ್ನು ಮನೆಗೆ ವಾಪಸು ಕಳಿಸಿದ್ದರು ಎಂದು ಹೇಳಲಾಗಿದೆ.

ಮಾರ್ಚ್ 24ರ ಮುಂಜಾನೆ ಒಂದು ಗಂಟೆಯ ವೇಳೆಗೆ ನೀತುಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ, ಆಕೆಯನ್ನು ಅವರ ಪತಿ ಕೃಷ್ಣ ಗ್ವಾಲಾ ಮತ್ತೊಮ್ಮೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಶುಶ್ರೂಷಕಿ ಗಾಯತ್ರಿ ಕರ್ತವ್ಯದಲ್ಲಿದ್ದರು. ಗರ್ಭಿಣಿ ನೀತುರನ್ನು ಪರೀಕ್ಷಿಸಿದ್ದ ಗಾಯತ್ರಿ, ಹೆರಿಗೆಯಾಗಲು ಇನ್ನೂ 15 ಗಂಟೆ ಬಾಕಿಯಿದೆ ಎಂದು ಹೇಳಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ, ದಂಪತಿಗಳು ಮತ್ತೆ ಮನೆಗೆ ವಾಪಸ್ಸಾಗಿದ್ದರು ಎನ್ನಲಾಗಿದೆ.

ಇದಾದ ಎರಡು ಗಂಟೆಯ ನಂತರ ನೀತುಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಯಾವುದೇ ವಾಹನಗಳು ಲಭ್ಯವಾಗದೆ ಹೋಗಿದ್ದರಿಂದ ಆತಂಕಗೊಂಡ ಆಕೆಯ ಪತಿ ಕೃಷ್ಣ ಗ್ವಾಲಾ, ತಮ್ಮ ಪತ್ನಿಯನ್ನು ಕೈಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಯತ್ತ ಧಾವಿಸಿದ್ದಾರೆ.

ಈ ಪ್ರಯಾಣದ ವೇಳೆ ನೀತು ಕೈಗಾಡಿಯಲ್ಲೇ ನವಜಾತ ಶಿಶುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ಆಸ್ಪತ್ರೆಯನ್ನು ಸಮೀಪಿಸಿದಾಗ, ಶಿಶುವಿನ ಕಾಲುಗಳು ಹೊರ ಬಂದಿದ್ದವಾದರೂ, ಅದರ ತಲೆ ಮಾತ್ರ ಗರ್ಭದೊಳಗೇ ಇತ್ತು ಎಂದು ಹೇಳಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಶುಶ್ರೂಷಕಿ ನೀತುಗೆ ಹೆರಿಗೆ ಮಾಡಿಸಿದ್ದಾರಾದರೂ, ಶಿಶು ಮಾತ್ರ ಗರ್ಭದಲ್ಲೇ ಮೃತಪಟ್ಟಿತ್ತು ಎನ್ನಲಾಗಿದೆ.

ಈ ಸಂಬಂಧ, ಸಂತ್ರಸ್ತ ಮಹಿಳೆಯು ಗುರುವಾರ ವಿಶೇಷ ಜಿಲ್ಲಾಧಿಕಾರಿ ಮನೀಶ್ ಜೈನ್‌ ಅವರಿಗೆ ದೂರು ಸಲ್ಲಿಸಿದ್ದರು. ಮರುದಿನ ಘಟನೆಯ ಸಿಸಿಟಿವಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ತನಿಖೆಗೆ ಆದೇಶಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದತ್ತ ಬೊಟ್ಟು ಮಾಡಿದ್ದ ಈ ತನಿಖಾ ವರದಿಯನ್ನು ಆಧರಿಸಿ, ಬ್ಲಾಕ್ ವೈದ್ಯಕೀಯ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವ ಜಿಲ್ಲಾಡಳಿತ, ಕರ್ತವ್ಯ ಲೋಪ ತೋರಿದ ಶುಶ್ರೂಷಕಿಯರಾದ ಚೇತನಾ ಹಾಗೂ ಗಾಯತ್ರಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಅಲ್ಲದೆ, ಸೈಲಾನಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತರಾಗಿದ್ದರೂ, ಗರ್ಭಿಣಿಯನ್ನು ಪರೀಕ್ಷಿಸದ ಡಾ. ಶೈಲೇಶ್ ಡಾಂಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸೇವೆಗಳ ಆಯುಕ್ತರಿಗೆ ಪತ್ರವನ್ನೂ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News