ಮೊಟ್ಟೆ, ಜ್ಯೂಸ್ ಮಾರಾಟಗಾರರಿಗೆ ಕೋಟ್ಯಂತರ ರೂ. ಜಿಎಸ್‌ಟಿ ಬಾಕಿ ನೋಟಿಸ್!

ಜ್ಯೂಸ್ ವ್ಯಾಪಾರಿ ರಹೀಸ್PC: x.com/ndtv
ದಮೋಹ್/ಅಲೀಗಢ: ಮಧ್ಯಪ್ರದೇಶದ ಮೊಟ್ಟೆ ಮಾರಾಟಗಾರ ಮತ್ತು ಉತ್ತರ ಪ್ರದೇಶದ ಜ್ಯೂಸ್ ವ್ಯಾಪಾರಿಗೆ ಆದಾಯ ತೆರಿಗೆ ಇಲಾಖೆಯಿಂದ ಕೋಟ್ಯಂತರ ರೂಪಾಯಿ ಜಿಎಸ್ಟಿ ತೆರಿಗೆ ಬಾಕಿ ಬಗ್ಗೆ ನೋಟಿಸ್ ಗಳು ಬಂದಿರುವ ವಿಚಿತ್ರ ಘಟನೆ ವರದಿಯಾಗಿದೆ.
ಇಬ್ಬರೂ ಆಯಾ ಕುಟುಂಬಗಳ ಏಕೈಕ ದುಡಿಯುವ ವ್ಯಕ್ತಿಗಳಾಗಿದ್ದು, ಈ ನೋಟಿಸ್ನ ನಿಂದ ಆಘಾತಗೊಂಡಿದ್ದಾಗಿ ಹೇಳಿದ್ದಾರೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಮೊಟ್ಟೆ ಮಾರಾಟಗಾರ ಪ್ರಿನ್ಸ್ ಸುಮನ್ ಅವರಿಗೆ 50 ಕೋಟಿ ರೂಪಾಯಿ ವಹಿವಾಟು ನಡೆಸಿದ ಆರೋಪದಲ್ಲಿ ನೋಟಿಸ್ ನಿಡಲಾಗಿದೆ. ಇಂಥ ದೊಡ್ಡ ಮೊತ್ತ ಕೇಳಿಯೂ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರಕ್ಕೆ 6 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಾಕಿ ಇದೆ ಎಂದು ನೋಟಿಸ್ ನಲ್ಲಿ ವಿವರಿಸಲಾಗಿದೆ.
ಸುಮನ್ ಅವರ ಹೆಸರಿನಲ್ಲಿ 2022ರಲ್ಲಿ ದೆಹಲಿಯ ಸ್ಟೇಟ್ ಝೋನ್-3ಯಲ್ಲಿ "ಪ್ರಿನ್ಸ್ ಎಂಟರ್ ಪ್ರೈಸಸ್" ಹೆಸರಿನ ಕಂಪನಿ ನೋಂದಣಿಯಾಗಿದೆ ಎಂದು ಇಲಾಖೆ ಹೇಳಿದೆ. "ನಾನು ಗಾಡಿಯಲ್ಲಿ ಮೊಟ್ಟೆ ಮಾರುತ್ತೇನೆ. ಕಂಪನಿ ಆರಂಭಿಸುವುದು ಇರಲಿ; ದೆಹಲಿಗೆ ಇದುವರೆಗೆ ತೆರಳಿಲ್ಲ" ಎಂದು ಪಥಾರಿಯಾ ನಗರದ ನಿವಾಸಿಯಾಗಿರುವ ಅವರು ಪ್ರತಿಕ್ರಿಯಿಸಿದ್ದಾರೆ.
ಇಂಥದ್ದೇ ಆಘಾತ ಉತ್ತರ ಪ್ರದೇಶದ ಅಲೀಗಢದ ಜ್ಯೂಸ್ ವ್ಯಾಪಾರಿ ಎಂ.ಡಿ ರಹೀಸ್ ಅವರಿಗೂ ಆಗಿದೆ. 7.5 ಕೋಟಿ ರೂಪಾಯಿ ತೆರಿಗೆ ಬಾಕಿ ಬಗ್ಗೆ ಅವರಿಗೆ ನೋಟಿಸ್ ನೀಡಲಾಗಿದೆ. "ಅಷ್ಟು ದೊಡ್ಡ ಮೊತ್ತವನ್ನು ನಾನು ಎಂದೂ ನೊಡಿಲ್ಲ. ಕೇವಲ ಜ್ಯೂಸ್ ಮಾರಾಟ ಮಾಡಿ ಜೀವನ ಸಾಗಿಸುತ್ತೇನೆ. ನೋಟಿಸ್ ಏಕೆ ನೀಡಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ" ಎಂದು ಅವರು ಹೇಳಿದ್ದಾರೆ. ಸುಳ್ಳು ಪ್ರಕರಣದಲ್ಲಿ ಸಿಲುಕಿಸದಂತೆ ಬಡ ವ್ಯಕ್ತಿಯಾದ ನನಗೆ ನೆರವಾಗುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.