‘ಸುಳ್ಳು ಪತ್ತೆ ಘಟಕ’ ಸ್ಥಾಪನೆಯ ಐಟಿ ತಿದ್ದುಪಡಿ ನಿಯಮಗಳನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

Update: 2024-09-20 16:08 GMT

ಬಾಂಬೆ ಹೈಕೋರ್ಟ್ | PTI  

ಮುಂಬೈ : ಬಾಂಬೆ ಹೈಕೋರ್ಟ್ ಶುಕ್ರವಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಗಳನ್ನು ‘‘ಅಸಾಂವಿಧಾನಿಕ’’ ಎಂಬುದಾಗಿ ಬಣ್ಣಿಸಿದೆ ಮತ್ತು ಅವುಗಳನ್ನು ರದ್ದುಗೊಳಿಸಿದೆ. ಈ ತಿದ್ದುಪಡಿಗಳು ಸರಕಾರದ ವಿರುದ್ಧದ ‘‘ಸುಳ್ಳು ವಿಷಯ’’ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿದ್ದವು.

ಬಾಂಬೆ ಹೈಕೋರ್ಟ್‌ನ ಈ ತೀರ್ಪನ್ನು ‘ಟೈಬ್ರೇಕರ್ ನ್ಯಾಯಾಧೀಶ’ ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಘೋಷಿಸಿದರು. ಇದೇ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವೊಂದು 2024ರ ಜನವರಿಯಲ್ಲಿ ಭಿನ್ನ ತೀರ್ಪುಗಳನ್ನು ನೀಡಿದ್ದರು. ಹಾಗಾಗಿ, ವಿಷಯವನ್ನು ಇತ್ಯರ್ಥಪಡಿಸಲು ಮೂರನೇ ನ್ಯಾಯಾಧೀಶರನ್ನು ಈ ಪೀಠಕ್ಕೆ ಸೇರಿಸಲಾಗಿತ್ತು.

‘‘ನಾನು ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಪ್ರಶ್ನಿಸಲಾಗಿರುವ ನಿಯಮಗಳು ಭಾರತೀಯ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ವಿಧಿ 19(1)(ಜಿ) (ಉದ್ಯೋಗದ ಹಕ್ಕು ಮತ್ತು ಸ್ವಾತಂತ್ರ್ಯ)ಯ ಉಲ್ಲಂಘನೆಯಾಗಿದೆ’’ ಎಂದು ನ್ಯಾ. ಚಂದೂರ್ಕರ್ ಹೇಳಿದರು.

ತಿದ್ದುಪಡಿ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿರುವ ‘‘ನಕಲಿ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ’’ ಪದಗಳು ಅಸ್ಪಷ್ಟವಾಗಿವೆ, ಹಾಗಾಗಿ, ನಿರ್ದಿಷ್ಟ ವ್ಯಾಖ್ಯೆಗಳ ಅನುಪಸ್ಥಿತಿಯಲ್ಲಿ ಅವುಗಳ ಬಳಕೆ ತಪ್ಪಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

2023ರ ಜನವರಿಯಲ್ಲಿ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಭಿನ್ನ ತೀರ್ಪುಗಳನ್ನು ನೀಡಿದ್ದರು. ನ್ಯಾ. ಪಟೇಲ್ ತಿದ್ದುಪಡಿ ನಿಯಮಗಳನ್ನು ರದ್ದುಗೊಳಿಸಿದರೆ, ನ್ಯಾ. ಗೋಖಲೆ ಅವುಗಳನ್ನು ಎತ್ತಿಹಿಡಿದಿದ್ದರು.

2021ರ ಮಾಹಿತಿ ತಂತ್ರಜ್ಞಾನ (ಇಂಟರ್‌ಮೀಡಿಯರಿ ಮಾರ್ಗದರ್ಶಿಸೂತ್ರಗಳು ಮತ್ತು ಡಿಜಿಟಲ್ ಮೀಡಿಯ ನೀತಿ ಂಹಿತೆ) ನಿಯಮಗಳಿಗೆ 2023ರ ಐಟಿ ತಿದ್ದುಪಡಿ ನಿಯಮಗಳಲ್ಲಿ ತಿದ್ದುಪಡಿ ತರಲಾಗಿತ್ತು. ಈ ತಿದ್ದುಪಡಿ ನಿಯಮಗಳ ಪೈಕಿ ಮಹತ್ವದ ಮೂರನೇ ನಿಯಮವು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಹರಿದಾಡುವ ಸರಕಾರದ ವಿರುದ್ಧದ ‘‘ತಪ್ಪು ಅಥವಾ ಸುಳ್ಳು ಸುದ್ದಿಗಳನ್ನು’’ ಗುರುತಿಸಲು ‘‘ವಾಸ್ತವಾಂಶ ಪತ್ತೆ ಘಟಕ’’ಗಳನ್ನು ಸ್ಥಾಪಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ.

2023 ಎಪ್ರಿಲ್ 6ರಂದು, ಕೇಂದ್ರ ಸರಕಾರವು ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿತು. ಈ ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾಗುವ ‘‘ವಾಸ್ತವಾಂಶ ಪತ್ತೆ ಘಟಕ’’ವು ಯಾವುದೇ ಪೋಸ್ಟ್‌ಗಳನ್ನು ‘‘ಸುಳ್ಳು, ತಪ್ಪು ಅಥವಾ ಸರಕಾರದ ಕ್ರಮಗಳ ಬಗ್ಗೆ ತಪ್ಪು ದಾರಿಗೆಳೆಯುವ ಉದ್ದೇಶಗಳನ್ನು ಹೊಂದಿದವುಗಳು’’ ಎಂಬುದಾಗಿ ತೀರ್ಮಾನಿಸಿದರೆ, ಅವುಗಳನ್ನು ಸಾಮಾಜಿಕ ಮಾಧ್ಯಮ ಕಂಪೆನಿಗಳ ಗಮನಕ್ಕೆ ತರುತ್ತವೆ. ಆಗ ಸಂಬಂಧಪಟ್ಟ ಸಾಮಾಜಿಕ ಮಾಧ್ಯಮ ಕಂಪೆನಿಗಳು ಆ ಪೋಸ್ಟ್‌ಗಳನ್ನು ಒಂದೋ ತೆಗೆದು ಹಾಕಬೇಕಾಗುತ್ತದೆ ಅಥವಾ ಅವುಗಳ ಮೇಲೆ ಡಿಸ್‌ಕ್ಲೇಮರ್ (ವಿವಾದಿತ ಪೋಸ್ಟ್ ಎಂಬ ಹಣೆಪಟ್ಟಿ)ಗಳನ್ನು ಹಾಕಬೇಕಾಗುತ್ತದೆ. ಒಂದು ವೇಳೆ ಸಾಮಾಜಿಕ ಮಾಧ್ಯಮ ಕಂಪೆನಿಯೊಂದು ಎರಡನೇ ಆಯ್ಕೆ (ಡಿಸ್‌ಕ್ಲೇಮರ್)ಯನ್ನು ಆಯ್ದುಕೊಂಡರೆ, ಆ ಕಂಪೆನಿಯು ತನ್ನ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅದು ಯಾವುದೇ ಕಾನೂನು ಕ್ರಮಗಳಿಗೆ ಒಳಗಾಗಬೇಕಾಗುತ್ತದೆ.

► ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಮಣಿಸುವ ನಿಯಮಗಳು ; ಅರ್ಜಿದಾರರ ವಾದ

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ, ಭಾರತೀಯ ಎಡಿಟರ್ಸ್ ಗಿಲ್ಡ್ ಮತ್ತು ಅಸೋಸಿಯೇಶನ್ ಆಫ್ ಇಂಡಿಯನ್ ಮ್ಯಾಗಝಿನ್ಸ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಶುಕ್ರವಾರ ಈ ಮಹತ್ವದ ತೀರ್ಪು ನೀಡಿದೆ.

ಕೇಂದ್ರ ಸರಕಾರ ಸ್ಥಾಪಿಸುವ ‘ವಾಸ್ತವಾಂಶ ಪತ್ತೆ ಘಟಕ’ವು ಕೇಂದ್ರ ಸರಕಾರದ ಕೆಲಸಗಳಿಗೆ ಸಂಬಂಧಿಸಿದ ಯಾವುದಾದರೂ ವಿಷಯವನ್ನು ‘‘ಸುಳ್ಳು, ತಪ್ಪು ಮತ್ತು ತಪ್ಪುದಾರಿಗೆಳೆಯುವಂಥದ್ದು’’ ಎಂಬುದಾಗಿ ಗುರುತಿಸಿದರೆ, ತನ್ನ ಬಳಕೆದಾರನು ಅಂಥ ವಿಷಯಗಳನ್ನು ಪ್ರಕಟಿಸದಂತೆ, ಪ್ರದರ್ಶಿಸದಂತೆ, ಅಪ್‌ಲೋಡ್ ಮಾಡದಂತೆ ಅಥವಾ ಹಂಚಿಕೊಳ್ಳದಂತೆ ಮಾಡಲು ತಾನು ಸಕಾರಣಿಕ ಪ್ರಯತ್ನಗಳನ್ನು ಮಾಡಿದ್ದೇನೆ ಎಂಬುದನ್ನು ಸರಕಾರಕ್ಕೆ ತೋರಿಸುವ ಅನಿವಾರ್ಯತೆಗೆ ಸಾಮಾಜಿಕ ಮಾಧ್ಯಮ ಕಂಪೆನಿಗಳು ಒಳಗಾಗುತ್ತವೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು.

‘‘ಇಲ್ಲಿ ‘ಕೇಂದ್ರ ಸರಕಾರದ ಕೆಲಸಗಳು’ ಎಂಬ ಪದಗಳು ಅಸ್ಪಷ್ಟವಾಗಿವೆ ಮತ್ತು ವಿಶಾಲ ವ್ಯಾಪ್ತಿಯನ್ನು ಹೊಂದಿವೆ, ಹಾಗಾಗಿ, ಈ ನಿಯಮಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತವೆ. ಸಾಮಾಜಿಕ ಮಾಧ್ಯಮ ಕಂಪೆನಿಗಳ ಮೇಲೆ ತೀವ್ರ ಪರಿಣಾಮಗಳನ್ನು ಉಂಟು ಮಾಡುವ ಉದ್ದೇಶದಿಂದ ಅನಿರ್ದಿಷ್ಟ ಪದಗಳನ್ನು ಬಳಸಲಾಗಿದೆ. ‘ವಾಸ್ತವಾಂಶ ಪತ್ತೆ ಘಟಕ’ವು ಬೆಟ್ಟುಮಾಡುವ ವಿಷಯವನ್ನು ತಮ್ಮ ವೇದಿಕೆಯಿಂದ ತೆಗೆದುಹಾಕಲೇಬೇಕಾದ ಅನಿವಾರ್ಯತೆಗೆ ಸಾಮಾಜಿಕ ಮಾಧ್ಯಮ ಕಂಪೆನಿಗಳು ಮುಂದಾಗುತ್ತವೆ. ಯಾಕೆಂದರೆ ತಮಗೆ ನೀಡಲಾಗಿರುವ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲು ಸಾಮಾಜಿಕ ಮಾಧ್ಯಮ ಕಂಪೆನಿಗಳು ಮುಂದಾಗಲಾರವು’’ ಎಂದು ಅರ್ಜಿದಾರರು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News