ಕಾಶ್ಮೀರಿ ಪತ್ರಕರ್ತ ಫಹಾದ್ ಶಾಗೆ ನೀಡಿದ್ದ ಜಾಮೀನು ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2024-10-16 11:58 GMT

 ಸುಪ್ರೀಂ ಕೋರ್ಟ್(PTI), ಫಹಾದ್ ಶಾ (PC : X \ @pzfahad)

ಹೊಸದಿಲ್ಲಿ : ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ UAPA ಕಾಯ್ದೆಯ ಕುರಿತು ಹೈಕೋರ್ಟ್ ನೀಡಿದ್ದ ಆದೇಶವನ್ನು ತಿರಸ್ಕರಿಸಿದೆ.

UAPA ಕಾಯ್ದೆಯಡಿ ಬಂಧಿತನಾದ ಆರೋಪಿಯಿಂದ ಸಮಾಜಕ್ಕೆ ಅಪಾಯವಿದೆ ಎಂಬದನ್ನು ನಿರೂಪಿಸಲು ಸಾಧ್ಯವಾಗಿದಿದ್ದರೆ ಆರೋಪಿಗೆ ಜಾಮೀನು ಮಂಜೂರು ಮಾಡಬಹುದು ಎಂದು ತೀರ್ಪು ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೈಕೋರ್ಟ್ ನ ತೀರ್ಪು ತಪ್ಪು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕಾಶ್ಮೀರ ಮೂಲದ ಪತ್ರಕರ್ತ ಫಹಾದ್ ಶಾಗೆ ಜಾಮೀನು ನೀಡಿದ ನವೆಂಬರ್ 2023 ರಲ್ಲಿ ಹೈಕೋರ್ಟ್ ತೀರ್ಪು, ಭಯೋತ್ಪಾದನಾ ವಿರೋಧಿ ಕಾಯಿದೆಯ ಸೆಕ್ಷನ್ 15 ರ ವ್ಯಾಪ್ತಿಯಲ್ಲಿ ಜಾಗತಿಕವಾಗಿ ಭಾರತದ ಖ್ಯಾತಿಯನ್ನು ಕಡಿಮೆ ಮಾಡುವುದನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿತ್ತು.

ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಸುಪ್ರೀಂ ಕೋರ್ಟ್ ಪೀಠವು ಫಹಾದ್ ಶಾ ಅವರಿಗೆ ನೀಡಲಾದ ಜಾಮೀನು ಆದೇಶ ಎತ್ತಿ ಹಿಡಿಯಿತು. ಫಹಾದ್ ಈಗಾಗಲೇ ಒಂದು ವರ್ಷದಿಂದ ಜಾಮೀನಿನ ಮೇಲೆ ಹೊರಗಿರುವುದು ಮತ್ತು ವಿಚಾರಣೆ ಇನ್ನೂ ಪ್ರಾರಂಭವಾಗದೇ ಇರುವುದನ್ನು ನ್ಯಾಯಾಲಯವು ಉಲ್ಲೇಖಿಸಿತು.

ಇತರ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶವನ್ನು ಪೂರ್ವನಿದರ್ಶನವಾಗಿ ಉಲ್ಲೇಖಿಸಬಾರದು ಎಂದು ನ್ಯಾಯಾಲಯವು ಹೇಳಿದೆ.

ಈಗ ನಿರ್ಬಂಧಿಸಲಾಗಿರುವ ಸುದ್ದಿ ವೆಬ್‌ಸೈಟ್ ದಿ ʼಕಾಶ್ಮೀರ್ ವಾಲ್ಲಾʼದ ಮುಖ್ಯ ಸಂಪಾದಕ ಶಾ ಅವರನ್ನು ಲೇಖನದ ಮೂಲಕ ಭಯೋತ್ಪಾದನೆಯನ್ನು ವೈಭವೀಕರಿಸಿದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ ಅಡಿಯಲ್ಲಿ ದೇಶದ್ರೋಹದ ಆರೋಪದಲ್ಲಿ ಫೆಬ್ರವರಿ 2022 ರಲ್ಲಿ ಬಂಧಿಸಲಾಗಿತ್ತು.

ನವೆಂಬರ್ 2023 ರಲ್ಲಿ ಜಾಮೀನು ಸಿಕ್ಕಿದಾಗ ಅವರು 21 ತಿಂಗಳ ಕಾಲ ಸೆರೆವಾಸದಲ್ಲಿದ್ದರು. 11 ವರ್ಷಗಳ ಹಿಂದಿನ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿರುವುದನ್ನು ಗಮನಿಸಿದ ಹೈಕೋರ್ಟ್ ಫಹಾದ್ ಶಾ ಅವರಿಗೆ ಜಾಮೀನು ನೀಡಿದೆ.

ತನ್ನ ಜಾಮೀನು ಆದೇಶದಲ್ಲಿ, ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ(UAPA)ಯಡಿಯಲ್ಲಿ ಶಾ ವಿರುದ್ಧದ ಆರೋಪಗಳನ್ನು ಹೈಕೋರ್ಟ್ ರದ್ದುಗೊಳಿಸಿತು. ಈ ಪ್ರಕರಣವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸರ್ಕಾರದ ವಿರುದ್ಧ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದೆ.

ಫಹಾದ್ ಶಾ ಅವರು ಭಯೋತ್ಪಾದನಾ-ವಿರೋಧಿ ಕಾನೂನಿನ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ) ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 35 ಮತ್ತು 39 ರ ಅಡಿಯಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯವು ಫೆಬ್ರವರಿ 2022 ರಲ್ಲಿ ಪತ್ರಕರ್ತ ಫಹಾದ್ ಶಾ ಅವರಿಗೆ ಜಾಮೀನು ನೀಡಿತ್ತು. ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ, ಗಲಭೆಗಳಿಗೆ ಪ್ರಚೋದನೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಶೋಪಿಯಾನ್ ಪೊಲೀಸರು ಫೆಬ್ರವರಿ 26 ರಂದು ಶಾ ಅವರನ್ನು ಮತ್ತೆ ಬಂಧಿಸಿದರು. ಮಾರ್ಚ್ 5, 2022 ರಂದು, ಅವರು ಜಾಮೀನು ಪಡೆದ ತಕ್ಷಣವೇ ಇನ್ನೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News