ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ಶಾಲಾ ವಿದ್ಯಾರ್ಥಿ!

Update: 2024-10-16 12:14 GMT

ಸಾಂದರ್ಭಿಕ ಚಿತ್ರ

ಮುಂಬೈ: ಮುಂಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವುಗಳ ಕಾರ್ಯಾಚರಣೆಯಲ್ಲಿನ ವಿಳಂಬ ಹಾಗೂ ಮಾರ್ಗ ಬದಲಾವಣೆಗೆ ಕಾರಣವಾದ ಬೆನ್ನಿಗೇ, ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆಯ ಪೋಸ್ಟ್ ಮಾಡಿದ್ದ ಛತ್ತೀಸ್ ಗಢದ 17 ವರ್ಷದ ಶಾಲಾ ಬಾಲಕನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಕಾರ, ಕೆಲ ತಿಂಗಳುಗಳ ಹಿಂದೆ 31 ವರ್ಷದ ವ್ಯಕ್ತಿಯೊಬ್ಬನೊಂದಿಗೆ ಮೊಬೈಲ್ ಅಂಗಡಿ ತೆರೆದು, ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಆರೋಪಿ ಬಾಲಕನು ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆ ಸಂದೇಶ ಹಂಚಿಕೊಂಡಿದ್ದ ಎಂದು ಹೇಳಲಾಗಿದೆ.

ಛತ್ತೀಸ್‌ಗಢದ 11ನೇ ತರಗತಿಯ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದ್ದ ಮುಂಬೈ ಪೊಲೀಸರು, ವಿಚಾರಣೆಗಾಗಿ ಮುಂಬೈಗೆ ಬರುವಂತೆ ಆರೋಪಿ ಬಾಲಕ ಹಾಗೂ ಆತನ ತಂದೆಗೆ ಸಮನ್ಸ್ ಜಾರಿಗೊಳಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ಮಂಗಳವಾರ ಈ ಪ್ರಕರಣದ ಸಂಬಂಧ ಅಪ್ರಾಪ್ತ ಬಾಲಕನನ್ನು ವಿಚಾರಣೆಗೊಳಪಡಿಸಲಾಯಿತು. ಈ ಪ್ರಕರಣದಲ್ಲಿ ಆತನ ಪಾತ್ರವಿದೆ ಎಂದು ತಾಂತ್ರಿಕ ವಿಶ್ಲೇಷಣೆಗಳು ಸೂಚಿಸಿದ ನಂತರ, ಆತನನ್ನು ವಶಕ್ಕೆ ಪಡೆಯಲಾಯಿತು ಹಾಗೂ ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ನಂತರ, ಬಾಲಾಪರಾಧ ನ್ಯಾಯ ಮಂಡಳಿಯು ಆತನನ್ನು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ" ಎಂದು ತಿಳಿಸಿದ್ದಾರೆ.

ಬಾಂಬ್ ಬೆದರಿಕೆಯಿಂದ ಇಂಡಿಗೊ ವಿಮಾನ ಯಾನ ಸಂಸ್ಥೆ ಕಾರ್ಯಾಚರಿಸುತ್ತಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳು ಹಾಗೂ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಕಾರ್ಯಾಚರಿಸುತ್ತಿದ್ದ ಒಂದು ಅಂತಾರಾಷ್ಟ್ರೀಯ ವಿಮಾನದ ಹಾರಾಟ ವ್ಯತ್ಯಯಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News