ದೂರುದಾರರ ಅರ್ಜಿಯಲ್ಲಿ ಮಾಜಿ ಮುಖ್ಯ ನ್ಯಾಯಾಧೀಶರ ಹೆಸರು ಪ್ರಸ್ತಾಪ: ಅರ್ಜಿದಾರ ವಕೀಲ ಮತ್ತು ನ್ಯಾಯಾಧೀಶರ ನಡುವೆ ವಾಗ್ವಾದ
ಹೊಸದಿಲ್ಲಿ: ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದ ಅರ್ಜಿದಾರ ವಕೀಲರು ಹಾಗೂ ನ್ಯಾಯಾಧೀಶರ ನಡುವಿನ ವಾಗ್ವಾದಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ಸಾಕ್ಷಿಯಾಯಿತು. ಇದರ ಬೆನ್ನಿಗೇ ಭದ್ರತಾ ಸಿಬ್ಬಂದಿಗಳನ್ನು ಕರೆಸಿಕೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, ಅರ್ಜಿದಾರರನ್ನು ನ್ಯಾಯಾಲಯದ ಕೊಠಡಿಯಿಂದ ಹೊರ ಹಾಕುವಂತೆ ಸೂಚಿಸಿತು ಎಂದು Bar and Bench ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅರ್ಜುನ್ ರಾಮಚಂದ್ರ ಹುಬ್ಳೀಕರ್ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವು, ಕೊನೆಗೆ ಅರ್ಜಿಯನ್ನು ವಜಾಗೊಳಿಸಿತು.
ಹುಬ್ಳೀಕರ್ ಅವರಿಂದ ಪದೇ ಪದೇ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಬಗ್ಗೆ ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. "ನಾವು ಇದಕ್ಕೆ ಕೊನೆ ಹಾಡಲಿದ್ದೇವೆ. ಒಂದರ ನಂತರ ಒಂದರಂತೆ ಇಷ್ಟೊಂದು ಅರ್ಜಿಗಳು" ಎಂದು ನ್ಯಾ. ತ್ರಿವೇದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತೀರ್ಪೊಂದರಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಸ್ತಕ್ಷೇಪ ನಡೆಸಿದ್ದಾರೆ. ಅವರ ವಿರುದ್ಧ ಆಂತರಿಕ ವಿಚಾರಣೆ ನಡೆಸಬೇಕು ಎಂದು ವಕೀಲರೂ ಆದ ಹುಬ್ಳೀಕರ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ನ್ಯಾ. ಗೊಗೊಯಿ ಅವರ ಕ್ರಮದಿಂದ ನನ್ನ ಜೀವನದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ ಎಂದು ಅವರು ವಾದಿಸಿದರು.
ಆದರೆ, ಅವರ ಮನವಿಯನ್ನು ಪುರಸ್ಕರಿಸಲು ಸಮ್ಮತಿಸದ ನ್ಯಾಯಪೀಠವು, "ನಾವು ದಂಡ ವಿಧಿಸಲಿದ್ದೇವೆ. ಯಾವುದೇ ನ್ಯಾಯಾಧೀಶರ ಹೆಸರನ್ನು ಪ್ರಸ್ತಾಪಿಸಬೇಡಿ. ನಿಮ್ಮ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ" ಎಂದು ನ್ಯಾಯಪೀಠವು ಹೇಳಿತು.
"ನಾನು ಸಾಯುವುದರೊಳಗಾದರೂ ನನಗೆ ನ್ಯಾಯ ದೊರೆಯಬೇಕು" ಎಂದು ಹುಬ್ಳೀಕರ್ ಪ್ರತಿಭಟಿಸಿದರು. ಆದರೆ, ತನ್ನ ನಿರ್ಧಾರವನ್ನು ಪುನರುಚ್ಚರಿಸಿದ ನ್ಯಾಯಪೀಠವು, "ಕ್ಷಮಿಸಿ, ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಿಮ್ಮ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ಹೇಳಿತು.
ನ್ಯಾಯಪೀಠವು ಪದೇ ಪದೇ ಎಚ್ಚರಿಕೆ ನೀಡಿದರೂ ಹುಬ್ಳೀಕರ್ ತಮ್ಮ ವಾದವನ್ನು ಮುಂದುವರಿಸಿದ್ದರಿಂದ, ನ್ಯಾಯಪೀಠವು ಭದ್ರತಾ ಸಿಬ್ಬಂದಿಗಳನ್ನು ಕರೆದು, ಹುಬ್ಳೀಕರ್ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರ ಹಾಕುವಂತೆ ಸೂಚಿಸಿತು. ಈ ಹಂತದಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಮ್ಮ ಪ್ರಕರಣದಲ್ಲಿ ನೋಟಿಸ್ ಜಾರಿಗೊಳಿಸಲು ನಿರಾಕರಿಸಿದ ನ್ಯಾಯಾಲಯದ ಕ್ರಮವನ್ನೂ ಹುಬ್ಳೀಕರ್ ಪ್ರಶ್ನಿಸಿದರು. ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸುವುದಕ್ಕೂ ಮುನ್ನ, "ಮೇಡಂ, ನೀವು ನನಗೆ ಅನ್ಯಾಯವೆಸಗುತ್ತಿದ್ದೀರಿ" ಎಂದು ಹುಬ್ಳೀಕರ್ ಆರೋಪಿಸಿದರು.
ನ್ಯಾಯಾಂಗದೊಂದಿಗೆ ಹುಬ್ಳೀಕರ್ ಸಂಘರ್ಷ ನಡರಸಿರುವುದು ಇದೇ ಮೊದಲ ಬಾರಿಯಲ್ಲ.
ಇದಕ್ಕೂ ಮುನ್ನ, ಸೆಪ್ಟೆಂಬರ್ 30ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ, ಪ್ರಕರಣದ ವಿಚಾರಣೆಯ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೂಡಾ ಪ್ರತಿವಾದಿಗಳ ಪಟ್ಟಿಯಲ್ಲಿ ನ್ಯಾ. ರಂಜನ್ ಗೊಗೊಯಿ ಅವರ ಹೆಸರು ಸೇರ್ಪಡೆ ಮಾಡಲು ಆಕ್ಷೇಪಿಸಿದ್ದರು ಹಾಗೂ ಪ್ರತಿವಾದಿಗಳ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕಲು ಹುಬ್ಳೀಕರ್ ಅವರಿಗೆ ಸೂಚಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಜಿ ನ್ಯಾಯಾಧೀಶರ ಹೆಸರು ಸೇರ್ಪಡೆ ಮಾಡುವುದರಿಂದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದರು.
ಇದರ ಬೆನ್ನಿಗೇ, ಮಂಗಳವಾರ ಹುಬ್ಳೀಕರ್ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.