ಪ್ರಾದೇಶಿಕ ಸಮಗ್ರತೆಯನ್ನು ಅಗತ್ಯವಾಗಿ ಗುರುತಿಸಬೇಕು: ಪಾಕಿಸ್ತಾನದಲ್ಲಿ ಎಸ್. ಜೈಶಂಕರ್‌ ಹೇಳಿಕೆ

Update: 2024-10-16 09:41 GMT

ಎಸ್.ಜೈಶಂಕರ | PC : PTI 

ಹೊಸದಿಲ್ಲಿ: ಬುಧವಾರ ಪಾಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು, ಪರಸ್ಪರ ಗೌರವದ ಆಧಾರದ ಮೇಲೆ ಪ್ರಾದೇಶಿಕ ಸಮಗ್ರತೆ ಮತ್ತು ಸಹಕಾರದ ಅಗತ್ಯಕ್ಕೆ ಒತ್ತು ನೀಡಿದರು.

ಭಯೋತ್ಪಾದನೆ,ಉಗ್ರವಾದ ಮತ್ತು ಪ್ರತ್ಯೇಕತಾವಾದಗಳನ್ನು ‘ಮೂರು ದುಷ್ಟಶಕ್ತಿಗಳು’ ಎಂದು ಬಣ್ಣಿಸಿದ ಅವರು,ದೇಶಗಳ ನಡುವಿನ ಸಹಕಾರವು ನಿಜವಾದ ಪಾಲುದಾರಿಕೆಗಳ ಮೇಲೆ ರೂಪುಗೊಂಡಿದೆಯೇ ಹೊರತು ಏಕಪಕ್ಷೀಯ ಅಜೆಂಡಾಗಳ ಮೇಲಲ್ಲ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ಜೊತೆಗೆ ಇಸ್ರೇಲ್-ಹಮಾಸ್-ಹಿಜ್ಬುಲ್ಲಾ ಮತ್ತು ರಶ್ಯಾ-ಉಕ್ರೇನ್ ಸಂಘರ್ಷಗಳನ್ನೂ ಪ್ರಸ್ತಾವಿಸಿದ ಅವರು, ‘ವಿಶ್ವ ವಿದ್ಯಮಾನಗಳ ಕಠಿಣ ಸಮಯದಲ್ಲಿ ಈ ಶೃಂಗಸಭೆಯು ನಡೆಯುತ್ತಿದೆ. ತೀವ್ರ ಹವಾಮಾನ ಘಟನೆಗಳಿಂದ ಹಿಡಿದು ಪೂರೈಕೆ ಸರಪಳಿಯಲ್ಲಿ ಅನಿಶ್ಚಿತತೆಗಳು ಮತ್ತು ಆರ್ಥಿಕ ಏರಿಳಿತಗಳವರೆಗೆ ವಿವಿಧ ರೀತಿಗಳ ಅಡೆತಡೆಗಳು ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮಗಳನ್ನು ಬೀರುತ್ತಿವೆ. ಸಾಲವು ಗಂಭೀರ ವಿಷಯವಾಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ವಿಶ್ವವು ಹಿಂದೆ ಬಿದ್ದಿದೆ. ತಂತ್ರಜ್ಞಾನವು ಉತ್ತಮ ಭರವಸೆಯನ್ನು ಹೊಂದಿದೆಯಾದರೂ ಹಲವಾರು ಹೊಸ ಕಳವಳಗಳಿಗೂ ಕಾರಣವಾಗುತ್ತಿದೆ. ಈ ಸವಾಲುಗಳಿಗೆ ಎಸ್‌ಸಿಒ ಸದಸ್ಯ ದೇಶಗಳು ಹೇಗೆ ಪ್ರತಿಕ್ರಿಯಿಸಬೇಕು?’ ಎಂದರು.

ಬೆಳವಣಿಗೆಗೆ ಪೂರಕವಾಗಿ ಮತ್ತು ಸಂಘರ್ಷ ತಡೆಗಟ್ಟುವಿಕೆಗೆ ಬಹುಮಖಿ ಪ್ರಾದೇಶಿಕ ಸಹಕಾರದ ಅಗತ್ಯವನ್ನೂ ಒತ್ತಿ ಹೇಳಿದ ಅವರು,ಚಟುವಟಿಕೆಗಳು ಭಯೋತ್ಪಾದನೆಯಿಂದ ನಿರೂಪಿಸಲ್ಪಟ್ಟರೆ ವ್ಯಾಪಾರಕ್ಕೆ ಉತ್ತೇಜನ ದೊರೆಯುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News