ಉಪಗ್ರಹ ಸ್ಪೆಕ್ಟ್ರಮ್ : ರಿಲಯನ್ಸ್ - ಮಿತ್ತಲ್ ಪೈಪೋಟಿ ನಡುವೆ ಮಸ್ಕ್ ಪರ ನಿಲುವು ತಾಳಿದ ಭಾರತ ಸರಕಾರ

Update: 2024-10-16 13:59 GMT

ಎಲಾನ್ ಮಸ್ಕ್ | PC : X

ಹೊಸದಿಲ್ಲಿ: ಉಪಗ್ರಹ ಬ್ರಾಡ್‌ಬ್ಯಾಂಡ್‌ನ್ನು ಆಡಳಿತಾತ್ಮಕವಾಗಿ ಹಂಚಿಕೆ ಮಾಡಲಾಗುತ್ತದೆ, ಹರಾಜು ಪ್ರಕ್ರಿಯೆ ಮೂಲಕವಲ್ಲ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.

ಮಂಗಳವಾರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಪೆಕ್ಟ್ರಂ ಹಂಚಿಕೆ ಕುರಿತು ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ದೂರಸಂಪರ್ಕ ಕಾಯ್ದೆ 2023 ಮತ್ತು ಜಾಗತಿಕ ಪರಿಪಾಠಗಳನ್ನು ಉಲ್ಲೇಖಿಸಿದರು.

ಸ್ಯಾಟ್‌ಕಾಮ್‌ಗಾಗಿ ಸ್ಪೆಕ್ಟ್ರಂ ಅನ್ನು ಆಡಳಿತಾತ್ಮಕವಾಗಿ ಹಂಚಿಕೆ ಮಾಡಲಾಗುವುದು, ಇದರರ್ಥ ಸ್ಪೆಕ್ಟ್ರಂ ಉಚಿತವಾಗಿ ದೊರೆಯುತ್ತದೆ ಎಂದಲ್ಲ. ವೆಚ್ಚವೇನು ಮತ್ತು ವೆಚ್ಚ ನಿಗದಿಗಾಗಿ ಸೂತ್ರವೇನು ಎನ್ನುವುದನ್ನು ಟ್ರಾಯ್ ನಿರ್ಧರಿಸಲಿದೆ ಎಂದ ಅವರು, ವಿಶ್ವಾದ್ಯಂತ ಉಪಗ್ರಹ ಸ್ಪೆಕ್ಟ್ರಂ ಅನ್ನು ಆಡಳಿತಾತ್ಮಕವಾಗಿ ಹಂಚಿಕೆ ಮಾಡಲಾಗುತ್ತಿದೆ ಮತ್ತು ಭಾರತವೂ ಇದನ್ನು ಅನುಸರಿಸಲಿದೆ ಎಂದು ಹೇಳಿದರು.

ತನ್ನ ಕಂಪನಿ ಸ್ಟಾರ್‌ಲಿಂಕ್ ಮೂಲಕ ಭಾರತೀಯ ಮಾರುಕಟ್ಟೆಯನ್ನು ಶೀಘ್ರ ಪ್ರವೇಶಿಸಲು ಯೋಜಿಸಿರುವ ಎಲಾನ್ ಮಸ್ಕ್ ಸ್ಪೆಕ್ಟ್ರಂನ ಆಡಳಿತಾತ್ಮಕ ಹಂಚಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಎಕ್ಸ್ ಪೋಸ್ಟ್‌ನಲ್ಲಿ ಭಾರತ ಸರಕಾರವನ್ನು ಹೊಗಳಿದ್ದಾರೆ.

‘ಸ್ವಾಗತಾರ್ಹ ಹೆಜ್ಜೆ. ಸ್ಟಾರ್‌ಲಿಂಕ್ ಮೂಲಕ ಭಾರತದ ಜನತೆಗೆ ಸೇವೆ ಸಲ್ಲಿಸಲು ನಮ್ಮ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ’ ಎಂದು ಮಸ್ಕ್ ಬುಧವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಾರ್ತಿ ಎಂಟರ್‌ಪೈಸಸ್‌ನ ಅಧ್ಯಕ್ಷ ಸುನಿಲ ಭಾರ್ತಿ ಮಿತ್ತಲ್ ಅವರು ಹರಾಜು ಪದ್ಧತಿಗಾಗಿ ಪ್ರತಿಪಾದಿಸಿದ ಬಳಿಕ ಸಚಿವ ಸಿಂದಿಯಾರ ಈ ಹೇಳಿಕೆ ಹೊರಬಿದ್ದಿದೆ.

ಭಾರತೀಯ ಮಾರುಕಟ್ಟೆಯ ಮೇಲೆ ಕಣ್ಣಿರಿಸಿರುವ ಮಸ್ಕ್‌ರ ಸ್ಟಾರ್‌ಲಿಂಕ್ ಮತ್ತು ಅಮೆಝಾನ್‌ನ ಪ್ರಾಜೆಕ್ಟ್ ಕಿಪೆರ್‌ನಂತಹ ವಿದೇಶಿ ನಿರ್ವಾಹಕರತ್ತ ಬೆಟ್ಟು ಮಾಡಿದ್ದ ಮಿತ್ತಲ್, ಸರಕಾರವು ಎಲ್ಲ ದೂರಸಂಪರ್ಕ ನಿರ್ವಾಹಕರಿಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಖಚಿತಪಡಿಸಬೇಕು ಎಂದು ಹೇಳಿದ್ದರು. ಎಲ್ಲ ಸ್ಯಾಟ್‌ಕಾಮ್ ಪೂರೈಕೆದಾರರು ಪರವಾನಿಗೆ ಶುಲ್ಕಗಳ ಪಾವತಿ ಸೇರಿದಂತೆ ಸಾಂಪ್ರದಾಯಿಕ ನಿರ್ವಾಹಕರು ಅನುಸರಿಸುತ್ತಿರುವ ಕಾನೂನು ಚೌಕಟ್ಟಿಗೇ ಬದ್ಧರಾಗಿರುವಂತೆ ಸರಕಾರವು ನೋಡಿಕೊಳ್ಳಬೇಕು ಎಂದೂ ಅವರು ಒತ್ತಿ ಹೇಳಿದ್ದರು.

ಉಪಗ್ರಹ ಸ್ಪೆಕ್ಟ್ರಂ ಹಂಚಿಕೆ ವಿಧಾನ ಕುರಿತು ಟ್ರಾಯ್ ಮತ್ತು ದೂರಸಂಪರ್ಕ ಕಂಪನಿಗಳ ನಡುವೆ ಸಹಮತವಿಲ್ಲ.

ಸ್ಯಾಟ್‌ಕಾಮ್ ಹಂಚಿಕೆಗಾಗಿ ಹರಾಜು ಪದ್ಧತಿಯನ್ನು ಬೆಂಬಲಿಸಿರುವ ದೂರಸಂಪರ್ಕ ಉದ್ಯಮಿಗಳಲ್ಲಿ ಮಿತ್ತಲ್ ಮೊದಲಿಗರೇನಲ್ಲ, ಈ ಹಿಂದೆ ರಿಲಯನ್ಸ್ ಜಿಯೋ ಕೂಡ ಹರಾಜು ಪದ್ಧತಿಯನ್ನು ಬೆಂಬಲಿಸಿತ್ತು.

ಅಲ್ಲದೆ ರಿಲಯನ್ಸ್ ಅ.14ರಂದು ಟ್ರಾಯ್ ಅಧ್ಯಕ್ಷ ಅನಿಲಕುಮಾರ ಲಾಹೋಟಿ ಅವರಿಗೆ ಬರೆದಿರುವ ಪತ್ರದಲ್ಲಿ,ಸೆ.27ರಂದು ಬಿಡುಗಡೆ ಮಾಡಲಾಗಿರುವ ಪ್ರಸ್ತಾವಿತ ಸ್ಪೆಕ್ಟ್ರಂ ಹಂಚಿಕೆ ನಿಯಮವನ್ನು ಪರಿಷ್ಕರಿಸುವಂತೆ ಕೇಳಿಕೊಂಡಿದೆ.

2ಜಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅದು,ತನ್ನ ಕಳವಳಗಳನ್ನು ಪರಿಹರಿಸದಿದ್ದರೆ ಕಾನೂನು ಸಮರ ನಡೆಸುವ ಸುಳಿವನ್ನು ನೀಡಿದೆ ಎಂದು outlookbusiness.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News