ಮುಸ್ಲಿಂ ಬಾಲಕನಿಗೆ ಕಪಾಳ ಮೋಕ್ಷ ಪ್ರಕರಣ | ಶಾಲಾ ಶಿಕ್ಷಕಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಉತ್ತರ ಪ್ರದೇಶ ನ್ಯಾಯಾಲಯ

Update: 2024-10-16 15:25 GMT

ಸಾಂದರ್ಭಿಕ ಚಿತ್ರ

ಮುಝಾಫ್ಫರ್ ನಗರ : ಮುಸ್ಲಿಂ ಬಾಲಕನಿಗೆ ಕಪಾಳ ಮೋಕ್ಷ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಗುರಿಯಾಗಿರುವ ಶಾಲಾ ಶಿಕ್ಷಕಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಇಲ್ಲಿನ ವಿಶೇಷ ನ್ಯಾಯಾಲಯವೊಂದು ನಿರಾಕರಿಸಿದೆ.

ಶಾಲಾ ಶಿಕ್ಷಕಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಪೊಕ್ಸೊ ಕಾಯ್ದೆಯಡಿ ರಚನೆಯಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಅಲ್ಕಾ ಭಾರತಿ, ಇಂತಹ ಪರಿಹಾರ ಪಡೆಯಲು ಆರೋಪಿಯು ನೈಜ ಕಾರಣಗಳನ್ನು ಒದಗಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಸಂತ್ರಸ್ತ ಬಾಲಕನ ಪರ ವಕೀಲ ಕಮ್ರನ್ ಝೈದಿ ಶಿಕ್ಷಕಿಯ ಜಾಮೀನು ಮನವಿಯನ್ನು ವಿರೋಧಿಸಿದರು. ಈಗಾಗಲೇ ಶಿಕ್ಷಕಿ ತ್ಯಾಗಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಾಗಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಅವರು ವಾದಿಸಿದರು.

ಸಂತ್ರಸ್ತ ಬಾಲಕನ ತಂದೆ ಇರ್ಶಾದ್ ನೀಡಿದ್ದ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 ಹಾಗೂ ಇನ್ನಿತರ ಸೆಕ್ಷನ್ ಗಳು ಮತ್ತು ಬಾಲಾಪರಾಧ ಕಾಯ್ದೆಯಡಿ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸಣ್ಣ ವಯಸ್ಸಿನ ಮುಸ್ಲಿಂ ಬಾಲಕನ ಕೆನ್ನೆಗೆ ಹೊಡೆಯುವಂತೆ ತ್ಯಾಗಿ ಇತರ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ಹಾಗೂ ಕೋಮುವಾದಿ ಹೇಳಿಕೆ ನೀಡುತ್ತಿರುವ ವಿಡಿಯೊ ಆಗಸ್ಟ್ 2023ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಈ ಘಟನೆ ಬೆಳಕಿಗೆ ಬಂದಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿತ್ತು ಹಾಗೂ ಈ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News