ಹರ್ಯಾಣ | ಸಿಎಂ ಆಗಿ ನಯಾಬ್ ಸಿಂಗ್ ಸೈನಿ ನಾಳೆ ಪ್ರಮಾಣ ವಚನ

Update: 2024-10-16 15:36 GMT

ನಯಾಬ್ ಸಿಂಗ್ ಸೈನಿ , ಅಮಿತ್ ಶಾ | PC : PTI 

ಚಂಡೀಗಡ : ಹರ್ಯಾಣದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ನಾಯಬ್ ಸಿಂಗ್ ಸೈನಿ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎರಡನೆ ಅವಧಿಗೆ ಹರ್ಯಾಣ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕೇಂದ್ರೀಯ ವೀಕ್ಷಕರಾಗಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದರು.

ಪಂಚಕುಲಾದಲ್ಲಿರುವ ಪಕ್ಷದ ಕಾರ್ಯಾಲಯ ಪಂಚಕಮಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಯಾಬ್ ಸಿಂಗ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಯಿತು. ನರ್ವಾನಾ ಕ್ಷೇತ್ರದ ಶಾಸಕ ಕೃಷ್ಣ ಕುಮಾರ್ ಬೇಡಿ ಅವರು ಸೈನಿಯವರ ಹೆಸರನ್ನು ಪ್ರಸ್ತಾವಿಸಿದ್ದು, ಅಂಬಾಲದ ಶಾಸಕ ಅನಿಲ್ ವಿಜ್ ಅನುಮೋದಿಸಿದರು ಹಾಗೂ ಎಲ್ಲಾ ಶಾಸಕರು ಅವಿರೋಧವಾಗಿ ನಯಾಬ್ ಅವರ ಆಯ್ಕೆಯನ್ನು ಬೆಂಬಲಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ನಾಯಬ್ ಸಿಂಗ್ ಸೈನಿ ಅವರು ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಚಂಡೀಗಢದಲ್ಲಿರುವ ರಾಜಭವನದಲ್ಲಿ ಭೇಟಿಯಾದರು ಹಾಗೂ ರಾಜ್ಯ ಸರಕಾರ ರಚನೆಗೆ ಹಕ್ಕು ಮಂಡಿಸಿದರು.

54 ವರ್ಷ ವಯಸ್ಸಿನ ಸೈನಿ ಅವರು ಹರ್ಯಾಣ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ ಪಂಚಕುಲಾದ ಸೆಕ್ಟರ್ 5 ರಲ್ಲಿರುವ ಪರೇಡ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಮತ್ತಿತರ ಪಕ್ಷದಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿ ಅಧಿಕಾರಕ್ಕೇರುತ್ತಿದೆ.ಅಕ್ಟೋಬರ್ 8ರಂದು ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿಯು 48 ಸ್ಥಾನಳನ್ನು ಗೆದ್ದಿದ್ದು, ಸರಳಬಹುಮತ ಪಡೆದಿದೆ. ಕಾಂಗ್ರೆಸ್ ಪಕ್ಷವು 37 ಸ್ಥಾನಗಳನ್ನು ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News