ಕೂಳೆ ಸುಡುವಿಕೆ | ಪಂಜಾಬ್, ಹರ್ಯಾಣ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Update: 2024-10-16 14:53 GMT

 ಸುಪ್ರೀಂ ಕೋರ್ಟ್ | PC : PTI

 

ಹೊಸದಿಲ್ಲಿ : ಬೆಳೆಗಳ ಕೂಳೆ ಸುಟ್ಟಿರುವುದಕ್ಕಾಗಿ ರೈತರಿಂದ ಸಾಂಕೇತಿಕ ದಂಡಗಳನ್ನು ಸಂಗ್ರಹಿಸುವ ಮೂಲಕ ಈ ಪಿಡುಗು ಮುಂದುವರಿಯಲು ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಬುಧವಾರ ಪಂಜಾಬ್ ಮತ್ತು ಹರ್ಯಾಣ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ‘ರಾಷ್ಟ್ರ ರಾಜಧಾನಿ ವಲಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿರ್ವಹಣೆ ಆಯೋಗ ಕಾಯ್ದೆ, 2021’ರ ಅಡಿ ಒಬ್ಬನೇ ಒಬ್ಬ ರೈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿತು.

ಆಯೋಗದ ಆದೇಶಗಳನ್ನು ಉಲ್ಲಂಘಿಸಿರುವುದಕ್ಕಾಗಿ ಎರಡು ರಾಜ್ಯ ಸರಕಾರಗಳ ಅಧಿಕಾರಿಗಳ ವಿರುದ್ಧ ದಂಡನಾ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಅಭಯ್ ಎಸ್. ಓಕ ಅವರ ನೇತೃತ್ವದ ನ್ಯಾಯಪೀಠವೊಂದು ಆದೇಶ ನೀಡಿತು. ಅದೂ ಅಲ್ಲದೆ, ಕಾನೂನು ಉಲ್ಲಂಘಿಸಿರುವ ರೈತರ ವಿರುದ್ಧವಾಗಲಿ, ರೈತರ ವಿರುದ್ಧ ಮೊಕದ್ದಮೆ ದಾಖಲಿಸಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧವಾಗಲಿ ಕಠಿಣ ಕ್ರಮವನ್ನು ಯಾಕೆ ತೆಗೆದುಕೊಳ್ಳಲಾಗಿಲ್ಲ ಎನ್ನುವುದಕ್ಕೆ ವಿವರಣೆ ನೀಡಲು ಅಕ್ಟೋಬರ್ 23ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತು.

‘‘ಅಂದರೆ, ಜನರು ಮಾಲಿನ್ಯದಿಂದ ಬಳಲಲಿ, ಆದರೆ ನಮಗೆ ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಇದು ಮಾಲಿನ್ಯಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರ ವಿಚಾರ. ನೀವು ಅದರೊಂದಿಗೆ ಅತ್ಯಂತ ಲಘುವಾಗಿ ವ್ಯವಹರಿಸುತ್ತಿದ್ದೀರಿ’’ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೂ ಒಳಗೊಂಡ ನ್ಯಾಯಪೀಠವು ಹೇಳಿತು.

ಈ ಎರಡು ರಾಜ್ಯಗಳು, ಆಯೋಗದ ಆದೇಶಗಳನ್ನು ಉಲ್ಲಂಘಿಸಿರುವುದಕ್ಕಾಗಿ ಒಂದೇ ಒಂದು ಮೊಕದ್ದಮೆಯನ್ನು ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿತು. ಕಾಯ್ದೆಯ ಪ್ರಕಾರ, ಕೂಳೆ ಸುಡುವುದಕ್ಕೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

‘‘ವಾಯು ಮಾಲಿನ್ಯ ನಿರ್ವಹಣೆ ಆಯೋಗ ಕಾಯ್ದೆಯನ್ನು ಜಾರಿಗೊಳಿಸದ ಎರಡು ರಾಜ್ಯಗಳ ಅಧಿಕಾರಿಗಳ ವಿರುದ್ಧ ಕಾಯ್ದೆಯ ಪರಿಚ್ಛೇದ 14ರಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ನಾವು ನಿರ್ದೇಶನ ನೀಡುತ್ತೇವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು. ಕಾಯ್ದೆಯನ್ನು ಜಾರಿಗೊಳಿಸಲು ಇದೊಂದೇ ಮಾರ್ಗ ಎಂದು ನ್ಯಾಯಾಲಯ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News