ಝಾಕಿರ್ ನಾಯ್ಕ್ ಅರ್ಜಿ ತಿರಸ್ಕರಿಸಲು ಸುಪ್ರೀಮ್‌ಗೆ ಮಹಾರಾಷ್ಟ್ರದ ಆಗ್ರಹ

Update: 2024-10-16 15:32 GMT

ಝಾಕಿರ್ ನಾಯ್ಕ್ | PC : facebook

ಹೊಸದಿಲ್ಲಿ : ದ್ವೇಷ ಭಾಷಣಕ್ಕಾಗಿ ತನ್ನ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸುವಂತೆ ವಿವಾದಾತ್ಮಕ ಧಾರ್ಮಿಕ ನಾಯಕ ಝಾಕಿರ್ ನಾಯ್ಕ್ 2013ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಬುಧವಾರ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ ಮಹಾರಾಷ್ಟ್ರ ಸರಕಾರವು, ಅವರು ದೇಶಭ್ರಷ್ಟರಾಗಿದ್ದು ದೇಶದ ಅತ್ಯುನ್ನತ ನ್ಯಾಯಾಲಯವು ಅರ್ಜಿಗೆ ಸ್ಪಂದಿಸಬೇಕಿಲ್ಲ ಎಂದು ವಾದಿಸಿತು.

ಅರ್ಜಿಯಲ್ಲಿ ನಾಯ್ಕ್ ಸಹಿ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯೇ ಆಕ್ಷೆಪವನ್ನೆತ್ತಿತ್ತು. ಯಾವುದೇ ಕಾರಣಕ್ಕೂ ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಮಹಾರಾಷ್ಟ್ರ ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಪ್ರತಿಪಾದಿಸಿದರು.

ದೇಶಭ್ರಷ್ಟ ಎಂದು ಘೋಷಿಸಲಾಗಿರುವ ನಾಯ್ಕ್ ಸಂವಿಧಾನದ ವಿಧಿ 32ರಡಿ ಇಂತಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿಲ್ಲ ಎಂದೂ ಅವರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಕ್ ಪರ ವಕೀಲ ಎಸ್.ಹರಿಹರನ್ ಅವರು, ದೇಶದಲ್ಲಿಯ ಅಥವಾ ವಿದೇಶದಲ್ಲಿಯ ಯಾವುದೇ ನ್ಯಾಯಾಲಯ ತನ್ನ ಕಕ್ಷಿದಾರನನ್ನು ದೇಶಭ್ರಷ್ಟ ಎಂದು ಘೋಷಿಸಿಲ್ಲ ಎಂದು ಹೇಳಿದರು.

ಆಕ್ಷೇಪಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು, ವಿಚಾರಣೆಯನ್ನು ಅ.26ಕ್ಕೆ ಮುಂದೂಡಿತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News