ಸಿಸೋಡಿಯ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರ ಜಾಮೀನು ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸಂಜಯ್ ಕುಮಾರ್ ಹಿಂದಕ್ಕೆ ಸರಿದಿದ್ದಾರೆ. ಹಾಗಾಗಿ, ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಲಾಗಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ಜುಲೈ 11ಕ್ಕೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸಂಜಯ್ ಕರೋಲ್ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ನಿಗದಿಪಡಿಸಲಾಗಿತ್ತು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅನುಷ್ಠಾನ ನಿರ್ದೇಶನಾಲಯ ಮತ್ತು ಸಿಬಿಐ ಸಲ್ಲಿರುವ ಮೊಕದ್ದಮೆಗಳಲ್ಲಿ ತನ್ನ ಜಾಮೀನು ಅರ್ಜಿಗಳಿಗೆ ಮರುಜೀವ ನೀಡಬೇಕೆಂದು ಕೋರಿ ಮನೀಶ್ ಸಿಸೋಡಿಯ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ಇಲ್ಲದಿರುವ ಇನ್ನೊಂದು ಪೀಠವು ಎತ್ತಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಗುರುವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿರುವಂತೆಯೇ, ‘‘ನಮ್ಮ ಸಹೋದರ ಸ್ವಲ್ಪ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಗಾಗಿ ಈ ಪ್ರಕರಣದ ವಿಚಾರಣೆ ನಡೆಸಲು ಬಯಸುವುದಿಲ್ಲ’’ ಎಂದು ನ್ಯಾ. ಖನ್ನಾ ಹೇಳಿದರು.
ಆಮ್ ಆದ್ಮಿ ಪಕ್ಷದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ, ಪ್ರಕರಣದ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ನ್ಯಾಯಪೀಠವನ್ನು ಕೋರಿದರು. ಇಲ್ಲಿ ಸಮಯ ಬಹಳ ಅಮೂಲ್ಯವಾಗಿದೆ ಎಂದು ಅವರು ಹೇಳಿದರು. ಎರಡೂ ಪ್ರಕರಣಗಳಲ್ಲಿ ವಿಚಾರಣೆ ಇನ್ನೂ ಆರಂಭವಾಗಿಲ್ಲ ಎಂದು ಅವರು ಹೇಳಿದರು.
ವಿಚಾರಣೆಯನ್ನು ಇನ್ನೊಂದು ಪೀಠವು ಜುಲೈ 15ರಂದು ನಡೆಸುವುದು ಎಂದು ಸುಪ್ರೀಂ ಕೋರ್ಟ್ ಹೇಳಿತು.
ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ, ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯ ಸಲ್ಲಿಸಿರುವ ಪ್ರಕರಣಗಳಲ್ಲಿ ಜಾಮೀನು ಕೋರಿ ಮನೀಶ್ ಸಿಸೋಡಿಯ ಸಲ್ಲಿಸಿದ್ದ ಅರ್ಜಿಗಳನ್ನು ಜೂನ್ 4ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಸಿಸೋಡಿಯರನ್ನು ಸಿಬಿಐ 2023 ಫೆಬ್ರವರಿ 26ರಂದು ಬಂಧಿಸಿತ್ತು. ಅದೇ ಪ್ರಕರಣದಲ್ಲಿ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯವು ಅವರನ್ನು ಅದೇ ವರ್ಷ ಮಾರ್ಚ್ 9ರಂದು ಬಂಧಿಸಿತ್ತು. ಅವರು 2023 ಫೆಬ್ರವರಿ 28ರಂದು ದಿಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.