ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸ ಎಜುಕೇಶನ್ ಆ್ಯಕ್ಟ್ ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ
ಹೊಸದಿಲ್ಲಿ: ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆ್ಯಕ್ಟ್ 2004 ಅನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ಮಾರ್ಚ್ 22ರಂದು ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆ ಹೇರಿದೆ.
ಮ್ಯಾನೇಜರ್ಸ್ ಅಸೋಸಿಯೇಶನ್ ಮದರಸಿ ಅರೆಬಿಯಾ, ಆಲ್ ಇಂಡಿಯಾ ಟೀಚರ್ಸ್ ಅಸೋಸಿಯೇಶನ್ ಮದರಸಿ ಅರೆಬಿಯಾ, ಮ್ಯಾನೇಜರ್ ಅಸೋಸಿಯೇಶನ್ ಅರ್ಬಿ ಮದರಸ ನಯೀ ಬಜಾರ್ ಮತ್ತು ಟೀಚರ್ಸ್ ಅಸೋಸಿಯೇಶನ್ ಮದರಸ್ ಅರೆಬಿಯಾ ಕಾನ್ಪುರ್ ಇವುಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ತಡೆಯಾಜ್ಞೆ ವಿಧಿಸಿದೆ.
ಕಾಯಿದೆಯ ನಿಬಂಧನೆಗಳನ್ನು ಅರ್ಥೈಸಲು ಹೈಕೋರ್ಟ್ ಮೇಲ್ನೋಟಕ್ಕೆ ವಿಫಲವಾಗಿದೆ. ಈ ನಿಬಂಧನೆಗಳು ನಿಯಂತ್ರಣಾತ್ಮಕ ಸ್ವರೂಪದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ, ಹೈಕೋರ್ಟ್ ಕಾಯಿದೆಯನ್ನು ರದ್ದುಗೊಳಿಸಿ ತೀರ್ಪು ನೀಡಿರುವುದು ಸುಮಾರು 17 ಲಕ್ಷ ವಿದ್ಯಾರ್ಥಿಗಳ ಶಿಕ್ಷಣವನ್ನು ಬಾಧಿಸಲಿದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.