ರಾಮದೇವ್ ಗೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ನಕಾರ: ಯೋಗ ಶಿಬಿರಗಳಿಗೆ ಸೇವಾ ತೆರಿಗೆ ಪಾವತಿ ಅನಿವಾರ್ಯ
ಹೊಸದಿಲ್ಲಿ: ಯೋಗ ಗುರು ರಾಮದೇವ ಅವರ ಪತಂಜಲಿ ಯೋಗಪೀಠ ಟ್ರಸ್ಟ್ ತಾನು ಆಯೋಜಿಸುವ ವಸತಿ ಸಹಿತ ಮತ್ತು ವಸತಿ ರಹಿತ ಯೋಗ ಶಿಬಿರಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿರುವುದಕ್ಕಾಗಿ ಸೇವಾ ತೆರಿಗೆಯನ್ನು ಪಾವತಿಸಲು ಬದ್ಧವಾಗಿದೆ ಎಂಬ ಮೇಲ್ಮನವಿ ನ್ಯಾಯಮಂಡಳಿಯ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕಸ್ಟಮ್ಸ್,ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಸಿಇಎಸ್‌ಟಿಎಟಿ)ಯ ಅಲಹಾಬಾದ್ ಪೀಠದ 2023,ಅ.5ರ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು,‘ಶುಲ್ಕಕ್ಕಾಗಿ ಶಿಬಿರಗಳಲ್ಲಿ ಯೋಗ ತರಬೇತಿಯು ಸೇವೆಯಾಗಿದೆ ಎಂದು ನ್ಯಾಯಮಂಡಳಿಯು ಪರಿಗಣಿಸಿರುವುದು ಸರಿಯಾಗಿದೆ. ಅದರ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣ ನಮಗೆ ಕಂಡು ಬರುತ್ತಿಲ್ಲ’ ಎಂದು ತನ್ನ ಆದೇಶದಲ್ಲಿ ಹೇಳಿದೆ.
ಪತಂಜಲಿ ಯೋಗಪೀಠ ಟ್ರಸ್ಟ್ ಆಯೋಜಿಸುವ ಯೋಗ ಶಿಬಿರಗಳಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ, ಹೀಗಾಗಿ ಈ ಶಿಬಿರಗಳು ‘ಆರೋಗ್ಯ ಮತ್ತು ಫಿಟ್‌ನೆಸ್ ಸೇವೆ’ ವರ್ಗದಡಿ ಬರುತ್ತವೆ ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಮಂಡಳಿಯು ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.
ಟ್ರಸ್ಟ್ ಶಿಬಿರಗಳಲ್ಲಿ ಭಾಗವಹಿಸಿದವರಿಂದ ದೇಣಿಗೆಗಳ ರೂಪದಲ್ಲಿ ಹಣವನ್ನು ಸಂಗ್ರಹಿಸಿದೆ ಮತ್ತು ಅದು ಯೋಗಸೇವೆಗಳನ್ನು ಒದಗಿಸಲು ಶುಲ್ಕವಾಗಿತ್ತು,ಹೀಗಾಗಿ ಸೇವಾ ತೆರಿಗೆ ಅನ್ವಯಗೊಳ್ಳುತ್ತದೆ ಎಂದು ನ್ಯಾಯಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿತ್ತು.
ಮೀರತ್ ವಲಯದ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ಆಯುಕ್ತರು ಅಕ್ಟೋಬರ್,2006ರಿಂದ ಮಾರ್ಚ್ 2011ರವರೆಗಿನ ಅವಧಿಗೆ ದಂಡ ಮತ್ತು ಬಡ್ಡಿಯೊಂದಿಗೆ 4.5 ಕೋಟಿ ರೂ.ಸೇವಾ ತೆರಿಗೆಯನ್ನು ಪಾವತಿಸುವಂತೆ ಟ್ರಸ್ಟ್‌ಗೆ ನೋಟಿಸ್ ಜಾರಿಗೊಳಿಸಿದ್ದರು.
ಟ್ರಸ್ಟ್ ತನ್ನ ಉತ್ತರದಲ್ಲಿ ತಾನು ಕಾಯಿಲೆಗಳ ಚಿಕಿತ್ಸೆಗಾಗಿ ಸೇವೆಗಳನ್ನು ಒದಗಿಸುತ್ತಿದ್ದು,ಆರೋಗ್ಯ ಮತ್ತು ಫಿಟ್ನೆಸ್ ವರ್ಗದಡಿ ತೆರಿಗೆಯಿಂದ ಮುಕ್ತವಾಗಿವೆ ಎಂದು ವಾದಿಸಿತ್ತು. ಆದರೆ ನ್ಯಾಯಮಂಡಳಿಯು ಈ ವಾದವನ್ನು ತಿರಸ್ಕರಿಸಿತ್ತು.