ಸಿಮೆಂಟ್‌ನಿಂದ ನಿರ್ಮಿಸಿದ ಮಂದಿರ ಪುರಾತನವಾಗಿರಲು ಸಾಧ್ಯವಿಲ್ಲ: ಯಮುನಾ ದಂಡೆಯಲ್ಲಿನ ಶಿವ ಮಂದಿರದ ನೆಲಸಮಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

Update: 2024-06-14 11:51 GMT

ಹೊಸದಿಲ್ಲಿ: ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ವು ನಗರದ ಗೀತಾ ಕಾಲನಿ ಮತ್ತು ಯಮುನಾ ನೆರೆ ಬಯಲು ಪ್ರದೇಶದ ಸಮೀಪದಲ್ಲಿರುವ ಪ್ರಾಚೀನ ಶಿವ ಮಂದಿರವನ್ನು ನೆಲಸಮಗೊಳಿಸುವುದರ ವಿರುದ್ಧ ಮಧ್ಯಂತರ ಪರಿಹಾರವನ್ನು ಒದಗಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.

ಡಿಡಿಎ ನೆಲಸಮ ಕ್ರಮದ ವಿರುದ್ಧ ಪ್ರಾಚೀನ ಶಿವ ಮಂದಿರ ಅವಾಮ್ ಅಖಾಡಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮೇ 29ರಂದು ತಿರಸ್ಕರಿಸಿತ್ತು. ‘ಅರ್ಜಿದಾರರು ಮಂದಿರದ ಕಾನೂನುಬದ್ಧ ಹಕ್ಕು ತೋರಿಸಲು ಯಾವುದೇ ಪುರಾವೆಗಳನ್ನು ಸಲ್ಲಿಸುವಲ್ಲಿ ದಯನೀಯವಾಗಿ ವಿಫಲಗೊಂಡಿದ್ದಾರೆ. ಭಗವಾನ್ ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬದಲಿಗೆ ನಾವು ಜನರು,ಆತನಿಂದ ರಕ್ಷಣೆ ಮತ್ತು ಆಶೀರ್ವಾದಗಳನ್ನು ಕೋರುತ್ತೇವೆ. ಯಮುನಾ ನದಿ ಪಾತ್ರ ಮತ್ತು ನೆರೆ ಬಯಲು ಪ್ರದೇಶದಲ್ಲಿಯ ಎಲ್ಲ ಅತಿಕ್ರಮಣಗಳು ಮತ್ತು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿದರೆ ಭಗವಾನ್ ಶಿವನು ಸಂತೋಷವಾಗಿರುತ್ತಾನೆ ’ಎಂದು ನ್ಯಾ.ಧರ್ಮೇಶ ಶರ್ಮಾ ಅವರ ಏಕ ನ್ಯಾಯಾಧೀಶ ಪೀಠವು ಹೇಳಿತ್ತು.

ಮಂದಿರದಲ್ಲಿಯ ವಿಗ್ರಹಗಳು ಮತ್ತು ಇತರ ಧಾರ್ಮಿಕ ವಸ್ತುಗಳನ್ನು ತೆಗೆದು ಬೇರೆ ದೇವಸ್ಥಾನದಲ್ಲಿ ಇರಿಸಲು ಅರ್ಜಿದಾರರಿಗೆ 15 ದಿನಗಳ ಕಾಲಾವಕಾಶವನ್ನು ಉಚ್ಚ ನ್ಯಾಯಾಲಯವು ನೀಡಿತ್ತು. ಅನಧಿಕೃತ ನಿರ್ಮಾಣವನ್ನು ನೆಲಸಮಗೊಳಿಸಲು ಅದು ಡಿಡಿಎಗೆ ಸ್ವಾತಂತ್ರ್ಯವನ್ನೂ ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ಆದರೆ ಅದು ನೆಲಸಮ ಕಾರ್ಯಾಚರಣೆಯ ವಿರುದ್ಧ ತಡೆಯಾಜ್ಞೆಯನ್ನು ನೀಡಿರಲಿಲ್ಲ. ಈ ನಡುವೆ ಏಕ ನ್ಯಾಯಾಧೀಶ ಪೀಠವು ನೀಡಿದ್ದ ಗಡುವು ಜೂ.12ರಂದು ಅಂತ್ಯಗೊಂಡಿತ್ತು.

ಬಳಿಕ ಸಮಿತಿಯು ಮಧ್ಯಂತರ ಪರಿಹಾರವನ್ನು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ರಜಾ ಅರ್ಜಿಯನ್ನು ಸಲ್ಲಿಸಿತ್ತು.

ಶುಕ್ರವಾರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸಂಜಯ ಕುಮಾರ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರ ರಜಾಕಾಲ ಪೀಠವು, ಮಂದಿರವು ಪುರಾತನವಾಗಿದೆ ಎನ್ನುವುದನ್ನು ಬೆಂಬಲಿಸಲು ದಾಖಲೆಗಳನ್ನು ತೋರಿಸುವಂತೆ ಅರ್ಜಿದಾರರನ್ನು ಕೇಳಿತು. ‘ಪ್ರಾಚೀನ ದೇವಸ್ಥಾನಗಳು ಕಲ್ಲಿನಿಂದ ನಿರ್ಮಾಣಗೊಂಡಿರುತ್ತವೆ, ಸಿಮೆಂಟ್‌ನಿಂದಲ್ಲ ಮತ್ತು ಅವುಗಳಿಗೆ ಬಣ್ಣವನ್ನು ಬಳಿದಿರುವುದಿಲ್ಲ. ಇವೆಲ್ಲ ಇತ್ತೀಚಿನ ದೇವಾಲಯಗಳು’ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.

ಮಂದಿರವು ಯಮುನಾ ನೆರೆ ಬಯಲು ಪ್ರದೇಶದಲ್ಲಿಲ್ಲ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು ಮಧ್ಯಂತರ ಪರಿಹಾರವನ್ನು ಒದಗಿಸುವಂತೆ ಕೋರಿಕೊಂಡರಾದರೂ ಸರ್ವೋಚ್ಚ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ. ಅದೇನೇ ಇದ್ದರೂ,ಮೇಲ್ಮನವಿಯು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ಬಾಕಿಯಿರುವುದರಿಂದ ಸಮಾನಾಂತರ ಕಲಾಪಗಳಿಗೆ ತಾನು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಕೇವಲ 24 ಗಂಟೆಗಳಿಗೆ ಮಧ್ಯಂತರ ಪರಿಹಾರವನ್ನು ಒದಗಿಸಿ, ಇಲ್ಲದಿದ್ದರೆ ಮನವಿಯು ನಿಷ್ಫಲಗೊಳ್ಳುತ್ತದೆ ಎಂದು ವಕೀಲರು ಮತ್ತೆ ಕೋರಿದರಾದರೂ,ನಿಮಗೆ ಅಂತಹ ಪರಿಹಾರವನ್ನು ನೀಡಲು ಸಾಕಷ್ಟು ದಾಖಲೆಗಳು ನಿಮ್ಮ ಬಳಿಯಲ್ಲಿಲ್ಲ ಎಂದು ನ್ಯಾಯಾಲಯವು ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News