ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಪರ 2021ರ ತನ್ನದೇ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2024-04-11 15:37 GMT

ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ .

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅನಿಲ ಅಂಬಾನಿಯವರ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಭಾರೀ ಆಘಾತವನ್ನು ಅನುಭವಿಸಿದೆ. ಅದರ ಅಂಗಸಂಸ್ಥೆ ದಿಲ್ಲಿ ಏರ್ಪೋರ್ಟ್ ಮೆಟ್ರೊ ಎಕ್ಸ್ಪ್ರೆಸ್ ಪ್ರೈ.ಲಿ.(ಡಿಎಎಂಇಪಿಎಲ್)ಗೆ 2,782 ಕೋಟಿ ರೂ.ಗಳನ್ನು ಪಾವತಿಸುವಂತೆ ದಿಲ್ಲಿ ಮೆಟ್ರೋ ರೇಲ್ ಕಾರ್ಪೊರೇಷನ್ (DMRC)ಗೆ ಆದೇಶಿಸಿದ್ದ ತನ್ನ ಹಿಂದಿನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ಈ ಮೊತ್ತವು ಈಗ ಬಡ್ಡಿಯೊಂದಿಗೆ 8,000 ಕೋಟಿ ರೂ.ಗೆ ಏರಿಕೆಯಾಗಿದೆ. ದಿಲ್ಲಿ ಮೆಟ್ರೊ ವಿರುದ್ಧದ ಈ ಮಧ್ಯಸ್ಥಿಕೆ ತೀರ್ಪು ವಿಕೃತಿ ಮತ್ತು ಪೇಟೆಂಟ್ ಅಕ್ರಮದಿಂದ ಕೂಡಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ ಅವರ ಪೀಠವು, ಡಿಎಂಆರ್ಸಿ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ಅಂಗೀಕರಿಸಲೇಬೇಕು. ಅದನ್ನು ದಿಲ್ಲಿ ಹೈಕೋರ್ಟ್ನ ವಿಭಾಗೀಯ ಪೀಠವು ಆದೇಶವನ್ನು ಹೊರಡಿಸಿದಾಗ ಇದ್ದ ಸ್ಥಿತಿಗೆ ಮರುಸ್ಥಾಪಿಸಲಾಗಿದೆ. ಅರ್ಜಿದಾರರು ಠೇವಣಿಯಿರಿಸಿರುವ ಹಣವನ್ನು ಮರಳಿಸಬೇಕು. ಬಲವಂತದ ಕ್ರಮದ ಭಾಗವಾಗಿ ಅರ್ಜಿದಾರರು ಪಾವತಿಸಿದ ಯಾವುದೇ ಹಣವನ್ನೂ ವಾಪಸ್ ಮಾಡಬೇಕು ಎಂದು ಹೇಳಿತು.

2021ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ನಿರ್ಧಾರದಲ್ಲಿ ಹಸ್ತಕ್ಷೇಪವನ್ನು ಮಾಡುವ ಮೂಲಕ ನ್ಯಾಯ ವಿತರಣೆ ಪ್ರಕ್ರಿಯೆಯಲ್ಲಿ ವಿಫಲಗೊಂಡಿದೆ ಎಂದು ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು ತಿಳಿಸಿತು.

ಮೇ 2017ರಲ್ಲಿ ಮಧ್ಯಸ್ಥಿಕೆ ನ್ಯಾಯಾಧಿಕರಣವು ಡಿಎಎಂಇಪಿಎಲ್ ಪರವಾಗಿ ತೀರ್ಪು ನೀಡಿತ್ತು. ಡಿಎಂಆರ್ಸಿ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದ ಡಿಎಎಂಇಪಿಎಲ್ ಬಳಿಕ ಸುರಕ್ಷತಾ ಸಮಸ್ಯೆಗಳನ್ನು ಮುಂದಿಟ್ಟು ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋ ಮಾರ್ಗವನ್ನು ಕಾರ್ಯಾಚರಿಸುವುದರಿಂದ ಹಿಂದೆ ಸರಿದಿತ್ತು. ರಚನಾತ್ಮಕ ದೋಷಗಳಿಂದಾಗಿ ಈ ಮಾರ್ಗವನ್ನು ನಿರ್ವಹಿಸುವುದು ಕಾರ್ಯಸಾಧ್ಯವಲ್ಲ ಎಂದು ಅದು ಪ್ರತಿಪಾದಿಸಿತ್ತು. ಇದು ಉಭಯ ಸಂಸ್ಥೆಗಳ ನಡುವೆ ವ್ಯಾಜ್ಯಕ್ಕೆ ಕಾರಣವಾಗಿತ್ತು.

ಏರ್ಪೋರ್ಟ್ ಎಕ್ಸ್ಪ್ರೆಸ್ ಕುರಿತು ಕಾರ್ಯಾಚರಣೆಗಳು ಸ್ಥಗಿತಗೊಂಡ ಬಳಿಕ ಡಿಎಂಎಮ್ಇಪಿಎಲ್ ಡಿಎಂಆರ್ಸಿ ಜೊತೆ ಒಪ್ಪಂದಕ್ಕನುಗುಣವಾಗಿ ವಿಷಯವನ್ನು ಮಧ್ಯಸ್ಥಿಕೆಗೆ ಒಯ್ದಿತ್ತು. ಮಧ್ಯಸ್ಥಿಕೆ ನ್ಯಾಯಾಧಿಕರಣವು ಡಿಎಎಂಇಪಿಎಲ್ ಗೆ 2,782 ಕೋಟಿ ರೂ.ಗಳನ್ನು ಬಡ್ಡಿಸಹಿತ ನೀಡುವಂತೆ ಡಿಎಂಆರ್ಸಿಗೆ ಆದೇಶಿಸಿತ್ತು. ದಿಲ್ಲಿ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶರ ಪೀಠವು ಈ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಈ ತೀರ್ಪನ್ನು ತಳ್ಳಿಹಾಕಿತ್ತು.

ಇದನ್ನು ಪ್ರಶ್ನಿಸಿ ಡಿಎಎಂಇಪಿಎಲ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. 2021,ಸೆ.19ರಂದು ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್ ಮತ್ತು ಎಸ್.ಆರ್.ಭಟ್ ಅವರ ಪೀಠವು ಮಧ್ಯಸ್ಥಿಕೆ ತೀರ್ಪನ್ನು ಎತ್ತಿ ಹಿಡಿದಿದ್ದು, ಬಳಿಕ ಡಿಎಎಂಇಪಿಎಲ್ ತನಗೆ ಬರಬೇಕಾದ ಹಣಕ್ಕಾಗಿ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಕ್ರಮಕ್ಕೆ ಚಾಲನೆ ನೀಡಿತ್ತು.

ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ವಿವೇಚನಾಯುತ ನಿರ್ಧಾರದಲ್ಲಿ ಹಸ್ತಕ್ಷೇಪಕ್ಕಾಗಿ ಸರ್ವೋಚ್ಚ ನ್ಯಾಯಾಲಯದ 2021ರ ತೀರ್ಪನ್ನು ಟೀಕಿಸಿದ ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು ಡಿಎಂಆರ್ಸಿಯ ಕ್ಯುರೇಟಿವ್ ಅರ್ಜಿಯನ್ನು ಪುರಸ್ಕರಿಸಿದೆ ಮತ್ತು ಡಿಎಂಆರ್ಸಿ ಠೇವಣಿ ಮಾಡಿರುವ ಹಣವನ್ನು ಮರಳಿಸುವಂತೆ ಆದೇಶಿಸಿದೆ. ಠೇವಣಿಯಿರಿಸಿದ್ದ ಹಣದಲ್ಲಿ ಏನಾದರೂ ಮೊತ್ತವನ್ನು ಡಿಎಎಂಇಪಿಎಲ್ ಪಡದುಕೊಂಡಿದ್ದರೆ ಅದನ್ನು ಡಿಎಂಆರ್ಸಿಗೆ ಮರಳಿಸುವಂತೆಯೂ ಅದು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News