ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮೂರು ಹೈಕೋರ್ಟ್‍ಗಳಲ್ಲಿನ ವಿಚಾರಣೆಗೆ ಸುಪ್ರೀಂ ತಡೆ
ಹೊಸದಿಲ್ಲಿ: ಕಳೆದ ಮೇ 5ರಂದು ನಡೆದಿದ್ದ ಪ್ರಸಕ್ತ ವರ್ಷದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ, ಕೊಲ್ಕತ್ತಾ ಮತ್ತು ಮುಂಬೈ ಹೈಕೋರ್ಟ್‍ಗಳಲ್ಲಿ ಸಲ್ಲಿಸಿದ್ದ ವಿಚಾರಣೆಗೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್‍ನಾಥ್ ಮತ್ತು ಎಸ್‍ವಿಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸಲ್ಲಿಸಿದ ವರ್ಗಾವಣೆ ದಾವೆಗೆ ಸಂಬಂಧಿಸಿ ನೋಟಿಸ್ ನೀಡಿದೆ. ಈ ಪ್ರಕರಣಗಳನ್ನು ಹೈಕೋರ್ಟ್‍ಗಳಿಂದ ಸುಪ್ರೀಂಕೋರ್ಟ್‍ಗೆ ವರ್ಗಾಯಿಸುವಂತೆ ಎನ್‍ಟಿಎ ಆಗ್ರಹಿಸಿದೆ.
ಆರಂಭದಲ್ಲಿ ಪೀಠ, ಹೈಕೋರ್ಟ್ ವಿಚಾರಣೆಗೆ ತಡೆ ನೀಡುವ ಸಂಬಂಧ ಆದೇಶ ಹೊರಡಿಸುವ ಒಲವು ಹೊಂದಿರಲಿಲ್ಲ. ವರ್ಗಾವಣೆ ದಾವೆ ಕುರಿತಂತೆ ನೋಟಿಸ್ ನೀಡಿದರೆ, ಹೈಕೋರ್ಟ್‍ಗಳು ವಿಚಾರಣೆ ಮುಂದುವರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಎನ್‍ಟಿಎ ಪರ ಹಾಜರಾಗಿದ್ದ ವಕೀಲ ವರ್ಧಮಾನ್ ಕೌಶಿಕ್ ಅವರು, ಹಿಂದಿನ ವಾರ ಇಂಥ ವರ್ಗಾವಣೆ ದಾವೆ ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದರೂ, ಹೈಕೋರ್ಟ್ ವಿಚಾರಣೆ ಮುಂದುವರಿಸಿದೆ ಎಂದು ವಾದ ಮಂಡಿಸಿದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿತು.