ಜಮ್ಮು ಕಾಶ್ಮೀರದಲ್ಲಿ ವಿಧಿ 370 ಒಂದು ತಾತ್ಕಾಲಿಕ ಕ್ರಮವಾಗಿತ್ತು: ಸಿಜೆಐ

Update: 2023-12-11 05:54 GMT

ಹೊಸದಿಲ್ಲಿ: ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಸಂದರ್ಭದಲ್ಲಿ ಬದಲಾಯಿಸಲಾಗದ ಕ್ರಮಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಅಧಿಕಾರವಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ. ರಾಷ್ಟ್ರಪತಿ ಆಡಳಿತವಿರುವಂತಹ ಸಂದರ್ಭದಲ್ಲಿ ಕೇಂದ್ರವು ರಾಜ್ಯವೊಂದರ ಪರವಾಗಿ ಕೈಗೊಳ್ಳುವ ಪ್ರತಿಯೊಂದು ಕ್ರಮವನ್ನು ಪ್ರಶ್ನಿಸಲು ಸಾಧ್ಯವಿಲ್ಲ, ಇದು ರಾಜ್ಯದ ಆಡಳಿತವನ್ನು ಬಾಧಿಸುವುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ವಿಧೀ 370 ಜಾರಿ ಒಂದು ತಾತ್ಕಾಲಿಕ ಕ್ರಮವಾಗಿತ್ತು ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತದ ಮಾನ್ಯತೆ ಕುರಿತಂತೆ ಏನನ್ನೂ ಹೇಳಲು ಸುಪ್ರೀಂ ಕೋರ್ಟ್‌ ನಿರಾಕರಿಸುತ್ತದೆ ಅದರೆ ರಾಷ್ಟ್ರಪತಿ ಆಡಳಿತ ಹೇರಿದ ನಂತರ ಚಲಾಯಿಸಬಹುದಾದ ಅಧಿಕಾರಗಳಲ್ಲಿ ಕೆಲವೊಂದು ನಿಯಂತ್ರಣಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಿದ ಕೇಂದ್ರದ ಕ್ರಮವು ಸಂವಿಧಾನಿಕವಾಗಿ ಮಾನ್ಯವೇ ಎಂಬ ಕುರಿತು ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೈಗೊಂಡ ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ಕುರಿತಂತೆ ಇಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪಂಚ ಸದಸ್ಯರ ಸಂವಿಧಾನಿಕ ಪೀಠ ತೀರ್ಪು ಪ್ರಕಟಿಸಲಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಇದ್ದಾರೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಕೇಂದ್ರ ಸರಕಾರವು 2019ರ ಆಗಸ್ಟ್ 5ರಂದು ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಏಕಪಕ್ಷೀಯವಾಗಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ನಿಯಮಗಳ ಪ್ರಕಾರ ಸಂವಿಧಾನವು ತಾತ್ಕಾಲಿ ಎಂದು ಪರಿಗಣಿಸಿದ್ದ ವಿಧಿ 370 ಅನ್ನು ರದ್ದುಗೊಳಿಸಲು ಸಂವಿಧಾನ ರಚನಾ ಸಭೆಯ ಅನುಮತಿಯ ಅಗತ್ಯವಿದೆ. ಆದರೆ ಈ ಸಂವಿಧಾನ ರಚನಾ ಸಭೆಯನ್ನು ವಿಸರ್ಜಿಸಿದ ಬಳಿಕ ಈ ವಿಧಿ ಹೇಗೆ ಖಾಯಂಗೊಂಡಿದೆ ಎಂದು ಕೋರ್ಟ್‌ ಪ್ರಶ್ನಿಸಿದೆ.

ತಾನು ಕಾನೂನು ಚೌಕಟ್ಟಿನಲ್ಲಿಯೇ ನಿರ್ಧಾರ ಕೈಗೊಂಡಿದ್ದಾಗಿ ಕೇಂದ್ರ ಹೇಳಿದೆ. ಜಮ್ಮು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದಿರುವುದರಿಂದ ಅಲ್ಲಿ ಉಗ್ರವಾದ ಸಮಸ್ಯೆ ಕಡಿಮೆಯಾಗಿದೆಯೆಂದೂ ಕೇಂದ್ರ ವಾದಿಸಿತ್ತು.

ಅರ್ಜಿದಾರರು ಮತ್ತು ಕೇಂದ್ರ ಸರ್ಕಾರದ ವಾದವಿವಾದಗಳನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಆಲಿಸಿತ್ತು.

ಇಂದು ಜಮ್ಮು ಕಾಶ್ಮೀರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News