ಆದಿತ್ಯನಾಥ್ ಆಡಳಿತಾವಧಿಯಲ್ಲಿ ನಡೆದ ಎನ್ ಕೌಂಟರ್ ಗಳ ತನಿಖಾ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

Update: 2023-08-12 02:32 GMT

ಹೊಸದಿಲ್ಲಿ: ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾದ ಪ್ರಕರಣದಲ್ಲಿ ವ್ಯವಸ್ಥಿತ ಲೋಪ ನಡೆದಿರುವುದನ್ನು ಶಂಕಿಸಿರುವ ಸುಪ್ರೀಂಕೋರ್ಟ್, ಯುಪಿಯಲ್ಲಿಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ 183 ಎನ್ ಕೌಂಟರ್ ಗಳ ತನಿಖಾ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಜತೆಗೆ ಇಂಥ ಎನ್ ಕೌಂಟರ್ ಗಳ ತನಿಖೆ ವಿಚಾರದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗೆ ಅನುಸಾರವಾಗಿ ಅಖಿಲ ಭಾರತ ಮಟ್ಟದಲ್ಲಿ ನಿಗದಿತ ವ್ಯವಸ್ಥೆಯನ್ನು ರೂಪಿಸಲು ಕೋರ್ಟ್ ಬಯಸಿದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ಆರು ವರ್ಷಗಳ ಅವಧಿಯಲ್ಲಿ ನಡೆದ ಎಲ್ಲ ಎನ್ ಕೌಂಟರ್ ಹತ್ಯೆಗಳ ತನಿಖಾ ವಿವರವನ್ನು ಒಳಗೊಂಡ ಅಫಿಡವಿಟ್ ಅನ್ನು ಆರು ವಾರಗಳ ಒಳಗಾಗಿ ಸಲ್ಲಿಸುವಂತೆ ಉತ್ತರ ಪ್ರದೇಶದ ಅಡ್ವೊಕೇಟ್ ಜನರಲ್ ಅಜಯ್ ಕುಮಾರ್ ಮಿಶ್ರಾ ಅವರಿಗೆ ನ್ಯಾಯಮೂರ್ತಿ ಎಸ್.ಆರ್.ಭಟ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿತು. ಜತೆಗೆ ಯಾವ ಪ್ರಕರಣಗಳಲ್ಲಿ ಚಾರ್ಜ್ಶೀಟ್ ಆಗಿದೆ ಎಂಬ ಬಗ್ಗೆ ಮತ್ತು ಉಳಿದ ಪ್ರಕರಣಗಳಲ್ಲಿ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ನಿರ್ದಿಷ್ಟವಾದ ವರದಿ ನೀಡುವಂತೆ ಆದೇಶಿಸಲಾಗಿದೆ.

ಆದರೆ, ಎನ್ ಕೌಂಟರ್ ಹತ್ಯೆಗಳ ಬಗ್ಗೆ ಮತ್ತು ಈ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ್ಯ ನ್ಯಾಯಾಂಗ ಆಯೋಗವನ್ನು ನೇಮಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಿಶಾಲ್ ತಿವಾರಿ ಮಾಡಿರುವ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ರಾಜ್ಯ ಸರ್ಕಾರ ಈಗಾಗಲೇ ಇಂತಹ ಆಯೋಗಗಳನ್ನು ನೇಮಕ ಮಾಡಿದೆ. ಎನ್ ಕೌಂಟರ್ ಹತ್ಯೆಗಳ ಬಗೆಗಿನ ತನಿಖೆಗೆ ಸೂಕ್ತ ಮಾರ್ಗಸೂಚಿಯನ್ನು ರೂಪಿಸುವುದಕ್ಕೆ ಸಂಬಂಧಿಸಿದ ವಿಚಾರವನ್ನು ನ್ಯಾಯಾಲಯ ಪರಿಗಣಿಸಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News