ಬಾಡಿಗೆ ತಾಯ್ತನ: ದಾನಿಗಳ ಅಂಡಾಣು, ವೀರ್ಯಾಣು ಬಳಕೆಗೆ ಅವಕಾಶ

Update: 2024-02-23 03:22 GMT

Photo: freepik

ಹೊಸದಿಲ್ಲಿ: ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ಕನಸು ಕಾಣುತ್ತಿರುವ ದಂಪತಿಗಳಿಗೆ ಹೊಸ ಆಶಾಕಿರಣ ಮೂಡಿದೆ. ಬಾಡಿಗೆ ತಾಯ್ತನದಲ್ಲಿ ದಾನಿಗಳ ಅಂಡಾಣು ಮತ್ತು ವೀರ್ಯಾಣುಗಳನ್ನು ಬಳಸಲು ಅವಕಾಶ ನೀಡುವ ಸಂಬಂಧ ಬಾಡಿಗೆ ತಾಯ್ತನ (ನಿರ್ಬಂಧ) ನಿಯಮಾವಳಿ-2022ಕ್ಕೆ ತಿದ್ದುಪಡಿ ತರಲಾಗಿದೆ.

ಸಂಭಾವ್ಯ ಪೋಷಕರ ಪೈಕಿ ಒಬ್ಬರ ಅಂಡಾಣು/ ವೀರ್ಯಾಣುವನ್ನು ಬಳಸಲು ವೈದ್ಯಕೀಯ ಸ್ಥಿತಿಯಲ್ಲಿ ಅವಕಾಶ ಇಲ್ಲ ಎಂದಾದಲ್ಲಿ ದಾನಿಗಳ ಅಂಡಾಣು/ ವೀರ್ಯಾಣು ಬಳಸಲು ಇದೀಗ ಅವಕಾಶ ಇರುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಬಾಡಿಗೆ ತಾಯ್ತನಕ್ಕೆ ಇಚ್ಛಿಸುವ ದಂಪತಿಯಿಂದಲೇ ಇದನ್ನು ಸಂಗ್ರಹಿಸಲಾಗುತ್ತದೆ.

ಆದರೆ ಸರ್ಕಾರ ಅಧಿಸೂಚನೆ ಹೊರಡಿಸಿರುವ ಬಾಡಿಗೆ ತಾಯ್ತನ (ನಿರ್ಬಂಧ) ತಿದ್ದುಪಡಿ ನಿಯಮಾವಳಿ-2024ದ ಅನುಸಾರ, ದಂಪತಿಯ ಪೈಕಿ ಒಬ್ಬರು ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿ ದೃಢೀಕರಿಸಬೇಕಾಗುತ್ತದೆ. "ದಾನಿಗಳ ವೀರ್ಯಾಣು/ ಅಂಡಾಣು ಬಳಸುವ ಬಾಡಿಗೆ ತಾಯ್ತನದಲ್ಲಿ ಜನಿಸುವ ಮಗು ಉದ್ದೇಶಿತ ಪೋಷಕರ ಒಬ್ಬರ ವೀರ್ಯಾಣು/ ಅಂಡಾಣುವನ್ನು ಹೊಂದಿರಬೇಕಾಗುತ್ತದೆ" ಎಂದು ನಿಯಮಾವಳಿ ಸ್ಪಷ್ಟಪಡಿಸಿದೆ.

ವಿಧವೆ ಅಥವಾ ವಿಚ್ಛೇದಿತ ಒಂಟಿ ಮಹಿಳೆ ಬಾಡಿಗೆ ತಾಯ್ತನಕ್ಕೆ ಒಳಪಡುವುದಾದಲ್ಲಿ, ತನ್ನ ಅಂಡಾಣುವನ್ನೇ ಬಳಸುವುದು ಕಡ್ಡಾಯ ಹಾಗೂ ದಾನಿಗಳ ವೀರ್ಯಾಣು ಬಳಸಿ ಬಾಡಿಗೆ ತಾಯ್ತನ ವಿಧಿವಿಧಾನದ ಸೌಲಭ್ಯ ಪಡೆಯಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News