ಮಧ್ಯಪ್ರದೇಶ | ಬೋರ್‌ವೆಲ್ ಗೆ ಬಿದ್ದ 10 ವರ್ಷದ ಬಾಲಕ ಮೃತ್ಯು
ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಶನಿವಾರ ಬೋರ್ ವೆಲ್ ಗೆ ಬಿದ್ದ 10 ವರ್ಷದ ಬಾಲಕನನ್ನು ಸತತ 16 ಗಂಟೆಗಳ ಕಾರ್ಯಾಚರಣೆ ಮೂಲಕ ಮೇಲಕ್ಕೆತ್ತಿದ್ದರೂ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರವಿವಾರ ಬೆಳಗ್ಗೆ 9.30ರ ಸುಮಾರಿಗೆ ಬಾಲಕನನ್ನು 140 ಅಡಿ ಆಳದ ಬೋರ್ ವೆಲ್ ನಿಂದ ಮೇಲಕ್ಕೆತ್ತಲಾಗಿತ್ತು. ಬಾಲಕ ಬೋರ್ ವೆಲ್ ನಲ್ಲಿ 39 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎಂದು ಹೇಳಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ ಡಿಆರ್ ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಮತ್ತು ಸ್ಥಳೀಯ ಪೊಲೀಸರು ಬಾಲಕನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು.
ಗುನಾ ಎಎಸ್ಪಿ ಮಾನ್ ಸಿಂಗ್ ಠಾಕೂರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಸುಮಿತ್ ಎಂಬ ಬಾಲಕ ಬೋರ್ ವೆಲ್ ಗೆ ಬಿದ್ದಿದ್ದಾನೆ. ಇಂದು ಬೆಳಿಗ್ಗೆ 9.30ರ ಸುಮಾರಿಗೆ ಸುಮಿತ್ ಅವರನ್ನು ಬೋರ್ ವೆಲ್ ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕನಿಗೆ ಪ್ರಜ್ಞೆ ಇರಲಿಲ್ಲ ಎಂದು ಹೇಳಿದ್ದರು.
ಗುನಾ ಜಿಲ್ಲಾಧಿಕಾರಿ ಸತ್ಯೇಂದ್ರ ಸಿಂಗ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ರಕ್ಷಣಾ ತಂಡಗಳು 40 ಅಡಿ ಆಳದವರೆಗೆ ಸಮಾನಾಂತರ ಹೊಂಡವನ್ನು ಅಗೆದು ಬಾಲಕನನ್ನು ಮೇಲಕ್ಕೆತ್ತಿವೆ. ಮಗುವಿನ ಸುರಕ್ಷತೆಗಾಗಿ ನಿರಂತರವಾಗಿ ಆಮ್ಲಜನಕವನ್ನು ನೀಡಲಾಗಿದೆ ಎಂದು ಹೇಳಿದ್ದರು.