ಗುಜರಾತ್ ನ ಕಛ್ ನಲ್ಲಿ 3.2 ತೀವ್ರತೆಯ ಭೂಕಂಪನ
Update: 2024-12-29 08:06 GMT
ಅಹಮದಾಬಾದ್: ರವಿವಾರ ಬೆಳಗ್ಗೆ ಗುಜರಾತ್ ನ ಕಛ್ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ ತಿಳಿಸಿದೆ.
ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಬೆಳಗ್ಗೆ 10.06 ಗಂಟೆ ವೇಳೆಗೆ ಈ ಭೂಕಂಪನ ಸಂಭವಿಸಿದ್ದು, ಭಚೌನ ಉತ್ತರ-ಈಶಾನ್ಯ ಭಾಗದಿಂದ 18 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಕೇಂದ್ರೀಕೃತವಾಗಿತ್ತು ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ಈ ತಿಂಗಳಲ್ಲಿ ಕಛ್ ಜಿಲ್ಲೆಯಲ್ಲಿ 3ಕ್ಕಿಂತ ಹೆಚ್ಚು ತೀವ್ರತೆಯಲ್ಲಿ ಸಂಭವಿಸಿರುವ ಮೂರನೆ ಭೂಕಂಪನ ಇದಾಗಿದೆ. ಡಿಸೆಂಬರ್ 23ರಂದು 3.7 ತೀವ್ರತೆಯ ಭೂಕಂಪನ ಕಛ್ ಜಿಲ್ಲೆಯನ್ನು ಅಪ್ಪಳಿಸಿತ್ತು. ಇದಕ್ಕೂ ಮುನ್ನ, ಡಿಸೆಂಬರ್ 7ರಂದು 3.2 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಭೂಕಂಪನ ಸಂಶೋಧನಾ ಸಂಸ್ಥೆ ಹೇಳಿದೆ.
ಕಳೆದ ತಿಂಗಳು ನವೆಂಬರ್ 18ರಂದು ಕಛ್ ನಲ್ಲಿ 4ರ ತೀವ್ರತೆಯ ಭೂಕಂಪನ ಸಂಭವಿಸಿತ್ತು.